ಮುಂಬೈ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ನವೆಂಬರ್ 26ರ ವಿಧ್ವಂಸಕಾರಿ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ದಟ್ಟವಾಗುತ್ತಿರುವ ನಡುವೆ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
ಸಚಿವ ಪ್ರಣಬ್ ಈ ಹಿಂದೆ "ಸೇನಾಕಾರ್ಯಾಚರಣೆ ಪರಿಗಣನೆಯಲ್ಲಿ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ" ಎಂಬ ವಿಚಾರ ಟಿವಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವಂತೆ, ವಿದೇಶಾಂಗ ಸಚಿವಾಲಯದಿಂದ ಈ ಸ್ಪಷ್ಟನೆ ಹೊರಬಿದ್ದಿದೆ
ಭಾರತಕ್ಕೆ ಬೇಕಾಗಿರುವ ಕ್ರಿಮಿನಲ್‌ಗಳನ್ನು ಹಸ್ತಾಂತರಿಸುವಂತೆ ಪಟ್ಟಿಯನ್ನು ಪಾಕಿಸ್ತಾನಕ್ಕೆ ನೀಡಲಾಗಿದ್ದು, ಇಸ್ಲಾಮಾಬಾದಿನ ಉತ್ತರಕ್ಕಾಗಿ ಕಾಯುತ್ತಿದೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಪಾಕಿಸ್ತಾನ ಹೈಕಮಿಷನರ್ ಶಾಹಿದ್ ಮಲಿಕ್ ಅವರನ್ನು ಸೋಮವಾರ ಸಾಯಂಕಾಲ ಭೇಟಿಯಾಗಿರುವ ವೇಳೆಗೆ ಭಾರತವು ಈ ಪಟ್ಟಿಯನ್ನು ನೀಡಿದೆ.
ಪಾಕಿಸ್ತಾನದ ಹೈಕಮಿಷನರ್‌ಗೆ ಬುಲಾವ್ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಕಳೆದ ವಾರದ ದಾಳಿಯ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಈ ಹಿಂದೆಯೂ ಇಂತಹ ಪಟ್ಟಿಗಳನ್ನು ಹಸ್ತಾಂತರಿಸಲಾಗಿದ್ದು, ಪ್ರಸ್ತುತ ಪರಿಷ್ಕೃತ ಪಟ್ಟಿಯನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಇದುವರೆಗೆ ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆ ತೋರಿಲ್ಲ ಎಂದು ಪ್ರಣಬ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹಿಂ ಮತ್ತು ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್‌ನನ್ನು ತಕ್ಷಣವೇ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತ ಪಾಕಿಸ್ತಾನವನ್ನು ಒತ್ತಾಯಿಸಿದೆ.
ಈ ವೇಳೆ ಭಾರತದ ಮೇಲೆ ನಡೆದಿರುವ ದಾಳಿಯ ವೇಳೆ ಅಮೆರಿಕದ ಪ್ರತಿಕ್ರಿಯೆಯನ್ನು ಪ್ರಣಬ್ ಶ್ಲಾಘಿಸಿದರು. ಅಮೆರಿಕದ ಹಾಲಿ ಅಧ್ಯಕ್ಷ ಬುಶ್ ಬಾಗೂ ಮುಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ವ್ಯಕ್ತಪಡಿಸಿರುವ ಐಕ್ಯಮತ್ಯದ ಕುರಿತೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
|