ಉಗ್ರರೊಂದಿಗೆ ಕಾದಾಟದ ವೇಳೆ ಪ್ರಾಣತೆತ್ತ ಮೇಜರ್ ಸಂದೀಪ್ ಅವರ ಕುಟುಂಬದ ವಿರುದ್ಧ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದು ವಿಶಾದನೀಯ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾರಟ್ ಅವರು, ಅಚ್ಯುತಾನಂದನ್ ಅವರು ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
"ತಾನು ಅಚ್ಯುತಾನಂದನ್ ಅವರೊಂದಿಗೆ ಈ ಕುರಿತು ದೂರವಾಣಿ ಮಾತುಕತೆ ನಡೆಸಿದ್ದು, ತನಗೆ ಉನ್ನಿಕೃಷ್ಣನ್ ಕುಟುಂಬಕ್ಕೆ ಸಂತಾಪ ಸೂಚಿಸುವ ಹೊರತು ಇನ್ಯಾವುದೇ ಉದ್ದೇಶವಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ" ಎಂಬುದಾಗಿ ಕಾರಟ್ ನುಡಿದರು.
ತನ್ನ ಮನೆಗೆ ಬಂದ ಅಚ್ಯುತಾನಂದನ್ ಅವರನ್ನು ಮೃತ ಸಂದೀಪ್ ತಂದೆ ಉನ್ನಿಕೃಷ್ಣನ್ ಅವರು ಅಕ್ಷರಶಃ ಓಡಿಸಿದ ಬಳಿಕ, ಕೇರಳದ ಮುಖ್ಯಮಂತ್ರಿಯವರು "ಅದೊಂದು ಹುತಾತ್ಮನ ಮನೆಯಲ್ಲದಿದ್ದರೆ ನಾಯಿಯೂ ಅತ್ತಕಡೆ ತಿರುಗಿ ನೋಡುತ್ತಿರಲಿಲ್ಲ" ಎಂಬ ಸಾರ್ವಜನಿಕ ಹೇಳಿಕೆ ನೀಡಿದ್ದರು.
ಅಚ್ಯುತಾನಂದನ್ ಅವರ ಈ ಹೇಳಿಕೆಯು ರಾಷ್ಟ್ರಾದ್ಯಂತ ಕಟುಟೀಕೆಗೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಕಾರಟ್ ಈ ಹೇಳಿಕೆ ಕುರಿತು ವಿಶಾದ ವ್ಯಕ್ತಪಡಿಸಿದ್ದಾರೆ. |