ರಾಷ್ಟ್ರಾದ್ಯಂತ ಉಗ್ರರ ದಾಳಿಯಿಂದ ಹೆಣಗಳು ಉರುಳುತ್ತಲೇ ಹೋಗುತ್ತಿದ್ದರೂ, ನಮ್ಮ ನೇತಾರರು ಪಕ್ಷಾತೀತ ಎಂಬಂತೆ, ಜನಸಾಮಾನ್ಯ ತೆರಿಗೆದಾರರ ಕೋಟ್ಯಂತರ ಹಣವನ್ನು ತಮ್ಮ ಸ್ವಯಂ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ.ಕೆಲವರಿಗೆ ನಿಜವಾಗಿಯೂ ಅಪಾಯವಿದೆ ಎಂದು ಹೇಳಬಹುದಾದರೂ, ಮತ್ತೆ ಕೆಲವರಿಗೆ ತಮ್ಮ ಸುತ್ತುಮುತ್ತು ಕಮಾಂಡೋಗಳನ್ನು ಇರಿಸಿಕೊಂಡು ಓಡಾಡಿ, ಟ್ರಾಫಿಕ್ ಜಾಮ್ ಮಾಡಿ ಜನಸಾಮಾನ್ಯರನ್ನು ತೊಂದರೆಗೆ ಸಿಲುಕಿಸುವುದು 'ಪ್ರತಿಷ್ಠೆ'ಯ ವಿಚಾರ.ದೇವೇಗೌಡ, ಅಮರ್ ಸಿಂಗ್, ರಾಮ್‌ವಿಲಾಸ್ ಪಾಸ್ವಾನ್, ಸಜ್ಜನ್ ಕುಮಾರ್, ಬಿ.ಎಲ್. ಜೋಷಿ, ಆರ್.ಎಲ್.ಭಾಟಿಯಾ, ಶರದ್ ಯಾದವ್, ರಾಮೇಶ್ವರ್ ಠಾಕೂರ್, ಇ. ಅಹ್ಮದ್, ಮರಳಿ ಮನೋಹರ್ ಜೋಷಿ, ಬಿಜ್ ಭೂಷಣ್ ಶರಣ್ ಮತ್ತು ಪ್ರಮೋದ್ ತಿವಾರಿಯಂತಹ ನಾಯಕರಿಗೆ ವಿಐಪಿ ರಕ್ಷಣೆ ನೀಡಲು ಸುಮಾರು 250 ಕೋಟಿಗಿಂತಲೂ ಅಧಿಕ ವೆಚ್ಚ ಮಾಡಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಅತ್ಯಂತ ಕಡಿಮೆ ಅಪಾಯ ಎದುರಿಸುತ್ತಿರುವವರು ಎಂದು ಹೇಳಲಾಗಿದೆ. ಕೊಲೆ ಪ್ರಕರಣವನ್ನು ಎದುರಿಸುತ್ತಿರುವಂತ ಸಜ್ಜನ್ ಕುಮಾರ್ ಅಂತಹವರ ರಕ್ಷಣೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚಮಾಡಬೇಕೇ ಎಂಬುದು ತೆರಿಗೆದಾರರ ಪ್ರಶ್ನೆ.ಭಯೋತ್ಪಾದನಾ ವಿರೋಧಿ ಕಾರ್ಯದಲ್ಲಿ ನಿರತವಾಗಿರಬೇಕಿರುವಂತಹ ಕಮಾಂಡೋಗಳು ವಿಐಪಿ ರಕ್ಷಣೆಗೆ ನಿಯೋಜಿತರಾಗುತ್ತಿರುವುದು ನಿಜವಾಗಿಯೂ ಹಾಸ್ಯಾಸ್ಪದ. 1984ರಲ್ಲಿ ಅಪಹರಣ ವಿರೋಧ ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಗಳಿಗಾಗಿ ರೂಪಿತವಾಗಿರುವ ಎಎಸ್‌ಜಿಯು ಎರಡು ದಳಗಳನ್ನು ಹೊಂದಿದೆ. ಸೇನಾ ಸಿಬ್ಬಂದಿಗಳು ಡೆಪ್ಯೂಟೇಶನ್ ಮೇಲೆ ಕಾರ್ಯನಿರ್ವಹಿಸುವ ವಿಶೇಷ ಕಾರ್ಯಪಡೆ(ಎಸ್ಎಜಿ) ಮತ್ತು ಐಟಿಬಿಪಿ, ಸಿಐಎಸ್ಎಫ್, ಸಿಆರ್ಎಸ್ಎಫ್, ಬಿಎಸ್ಎಫ್ ಮತ್ತು ಎಸ್ಎಸ್‌ಬಿಗಳ ಸಿಬ್ಬಂದಿಗಳನ್ನು ಹೊಂದಿರುವ ವಿಶೇಷ ರೇಂಜರ್‌ಗಳ ಪಡೆ(ಎಸ್ಆರ್‌ಜಿ). ಎಸ್ಆರ್‌ಜಿಯ ಅರ್ಧಕ್ಕರ್ಧ ಸಿಬ್ಬಂದಿಗಳನ್ನು ಈ 'ಅತಿಮುಖ್ಯ ವ್ಯಕ್ತಿ'ಗಳ ಭದ್ರತೆಗಾಗಿ ನಿಯೋಜಿಸಲಾಗಿದೆ.ಈ ಪಡೆಗಳು ಪ್ರಧಾನಿ, ಮಾಜಿ ಪ್ರಧಾನಿಗಳು ಮತ್ತು ಗಾಂಧಿ ಕುಟುಂಬದ ರಕ್ಷಣೆಗಾಗೇ ಇರುವ ವಿಶೇಷ ರಕ್ಷಣಾ ಪಡೆ(ಎಸ್‌ಪಿಜಿ)ಯ ಹೊರತಾಗಿರುವುದು. 2008-09ರಲ್ಲಿ ಎಸ್‌ಜಿಪಿ ಬಜೆಟ್ 180 ಕೋಟಿ ರೂಪಾಯಿ. ಕಳೆದ ವರ್ಷ 117 ಕೋಟಿ ನಿಗದಿ ಪಡಿಸಲಾಗಿದ್ದರೆ, ಈ ವರ್ಷಕ್ಕೆ 180 ಕೋಟಿಗೇರಿಸಲಾಗಿದೆ. ಆದರೆ ಭಯೋತ್ಪಾದಕರಿಂದ ರಾಷ್ಟ್ರಾದ್ಯಂತ ಕೋಟ್ಯಂತರ ಜನಸಾಮಾನ್ಯರ ರಕ್ಷಣೆಗಾಗಿ ಇರುವ ಎನ್ಎಸ್‌ಜಿಯ ಈ ವರ್ಷದ ಬಜೆಟ್ 159 ಕೋಟಿ ರೂಪಾಯಿ. ಕಳೆದ ವರ್ಷ ಇದು 158 ಕೋಟಿ ರೂಪಾಯಿ ಆಗಿತ್ತು, ಈ ವರ್ಷ ಒಂದು ಕೋಟಿ ರೂಪಾಯಿ ಏರಿಸಲಾಗಿದೆ.ಎಸ್‌ಪಿಜಿ ಮತ್ತು ಎನ್ಎಸ್‌ಜಿಯಲ್ಲದೆ ಆಯಾ ರಾಜ್ಯಗಳ ದೊಡ್ಡ ಸಂಖ್ಯೆಯ ಪೊಲೀಸರೂ ಈ ನೇತಾರರ ಹಿಂದೆಮುಂದೆ ಓಡಬೇಕಾಗಿದೆ. ಸ್ವಯಂ ಪ್ರಾಮುಖ್ಯತೆ ಕಲ್ಪಿಸಿಕೊಂಡಿರುವ ನೇತಾರರ ಸಂಖ್ಯೆ ದೆಹಲಿಯಲ್ಲಿ ಗರಿಷ್ಠವಾಗಿದೆ. ಸುಮಾರು 14,200 ಪೊಲೀಸರನ್ನೂ ಈ 'ಪ್ರಮುಖರ' ರಕ್ಷಣೆಗಾಗಿ ನಿಯೋಜಿಸಲಾಗಿದ್ದು, 24 ಗಂಟೆಯೂ ಇವರು ಕರ್ತವ್ಯನಿರತರಾಗಿರಬೇಕು.ಅತಿಗಣ್ಯರ ರಕ್ಷಣೆಯನ್ನು ನಾಲ್ಕು ಹಂತಗಳಲ್ಲಿ ನೀಡಲಾಗುತ್ತಿದೆ. ಝಡ್ ಪ್ಲಸ್, ಝಡ್, ವೈ, ಮತ್ತೆ ಎಕ್ಸ್ ವರ್ಗಗಳು. ಝಡ್ ಪ್ಲಸ್ ಭದ್ರತೆ ಒದಗಿಸಲು ಎನ್ಎಸ್‌ಜಿಯ ಬ್ಲಾಕ್ ಕ್ಯಾಟ್‌ಗಳನ್ನು ಒದಗಿಸಲಾಗುತ್ತದೆ. ಆರು ಅಧಿಕಾರಿಗಳು, ಇಬ್ಬರು ಮುಖ್ಯ ಪೇದೆಗಳು 12 ಪೇದೆಗಳು, ಒಂದು ಎಸ್ಕಾರ್ಟ್ ಮತ್ತು ಒಂದ ಪೈಲಟ್ ವಾಹನವನ್ನು ಹೊಂದಿದೆ. ಎಲ್.ಕೆ.ಆಡ್ವಾಣಿ, ಮಾಯಾವತಿ, ನರೇಂದ್ರ ಮೋದಿ, ಜಯಲಲಿತಾ, ಮುರಳಿ ಮನೋಹರ್ ಜೋಷಿ, ಅಮರ್ ಸಿಂಗ್ ಮತ್ತು ಪಾಸ್ವಾನ್ ಅವರಂತಹ 30 ರಾಜಕಾರಣಿಗಳಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ.68 ಅತಿ ಗಣ್ಯರು ಝಡ್ ವರ್ಗದ, 243 ವಿಐಪಿಗಳು ವೈ ವರ್ಗದ ಮತ್ತು 81 ಮಂದಿ ಎಕ್ಸ್ ವರ್ಗದ ಭದ್ರತೆಯನ್ನು ಪಡೆಯುತ್ತಿದ್ದಾರೆ. ಕೆಂಪುದೀಪದ ಗೂಟದ ಕಾರುಗಳಲ್ಲಿ ಓಡಾಡುವ ಇವರು ಇತರ ಸಾಮಾನ್ಯ ಜನತೆಗೆ ಯಾವಾಗಲೂ ಉಪದ್ರವಕಾರಿಯಾಗಿ ಕಾಡುತ್ತಾರೆ. ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡುವ ಜನರು ಇವರಿಗೆ ಹಿಡಿಹಿಡಿ ಶಾಪಹಾಕುತ್ತಾರೆ.ದೆಹಲಿ ಹೈಕೋರ್ಟ್ ಇತ್ತೀಚೆಗೆ ಪ್ರಕರಣ ಒಂದರ ವಿಚಾರಣೆ ವೇಳೆಗೆ, "ರಾಜಕಾರಣಿಗಳು ರಕ್ಷಿಸಬೇಕಿರುವ ರಾಷ್ಟ್ರೀಯ ಆಸ್ತಿಗಳೇನು ಅಲ್ಲ" ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. |