ಅದು ಮೇಜರ್ ಸಂದೀಪ್‌ನ ಮನೆಯಲ್ಲದಿದ್ದರೆ, ಅತ್ತ ಒಂದು ನಾಯಿಯೂ ತಿರುಗಿನೋಡುತ್ತಿರಲಿಲ್ಲ ಎಂದು ಹೇಳಿ ವಿವಾದಕ್ಕೆ ಸಿಲುಕಿರುವ ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಇದೀಗ ಬೇರೆಯೇ ರಾಗಹಾಡುತ್ತಿದ್ದು, ತನ್ನ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎನ್ನುತ್ತಿದ್ದಾರೆ.ಮುಂಬೈಯಲ್ಲಿ ದಾಳಿನಡೆಸಿದ್ದ ಉಗ್ರರೊಂದಿಗೆ ಹೋರಾಡುವ ವೇಳೆ ಪ್ರಾಣಕಳೆದುಕೊಂಡ ಯೋಧ ಸಂದೀಪ್ ಕುಟುಂಬಕ್ಕೆ ಸಂತಾಪ ಸೂಚಿಸಲು ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್, ಗೃಹಸಚಿವ ಕೊಡಿಯೆರಿ ಬಾಲಕೃಷ್ಣನ್ ಅವರೊಂದಿಗೆ ಆಗಮಿಸಿದ್ದ ವೇಳೆ, ಸಂದೀಪ್ ತಂದೆ ಉನ್ನಿಕೃಷ್ಣನ್ ತನ್ನಮನೆಯ ಬಾಗಿಲು ಹಾಕಿ, ಜಾಗ ಖಾಲಿಮಾಡುವಂತೆ ಹೇಳಿದ್ದರು. ಇದರಿಂದ ಕ್ರೋಧಗೊಂಡ ಅಚ್ಯುತಾನಂದನ್ ಮೇಲಿನ ಹೇಳಿಕೆ ನೀಡಿದ್ದರು. ಅಚ್ಯುತಾನಂದನ್ ಹೇಳಿಕೆಗೆ ರಾಷ್ಟ್ರಾದ್ಯಂತ ತೀವ್ರ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ವಿಶಾದ ವ್ಯಕ್ತಪಡಿಸಿದ್ದರು.ಉನ್ನಿಕೃಷ್ಣನ್ ಕುಟುಂಬದಿಂದ ಕ್ಷಮೆಯಾಚಿಸಲು ನಿರಾಕರಿಸಿರುವ ಅಚ್ಯುತಾನಂದನ್, ತಾನು ಸಹಜವಾಗಿ ಇತರ ಸಂದರ್ಭಗಳಲ್ಲಿ ಹೇಳುವಂತೆಯೇ "ನಾಯಿಯೂ ಅತ್ತ ತಿರುಗಿನೋಡುತ್ತಿರಲಿಲ್ಲ" ಎಂದು ಹೇಳಿದ್ದಾಗಿ ತಿಪ್ಪೆ ಸಾರಿಸಿದ್ದು, ಇದನ್ನು ಮಾಧ್ಯಮಗಳು ತಪ್ಪಾಗಿ ಉಲ್ಲೇಖಿಸಿರುವುದರಿಂದ 'ತನಗೆ ನೋವಾಗಿದೆ' ಎಂದು ಹೇಳಿದ್ದಾರೆ.ಮುಂಬೈದಾಳಿಗೆ ಪ್ರಾಮುಖ್ಯತೆ ನೀಡುವ ಬದಲಿಗೆ ಮಾಧ್ಯಮಗಳು ಈ ನಿರ್ದಿಷ್ಟ ವಿಚಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ ಎಂದೂ ಅಚ್ಯುತಾನಂದನ್ ಹರಿಹಾಯ್ದಿದ್ದಾರೆ.ಈ ಮಧ್ಯೆ ಕೇರಳ ವಿರೋಧ ಪಕ್ಷಗಳು ಅಚ್ಯುತಾನಂದನ್ ಅವರು ಬೇಷರತ್ ಕ್ಷಮೆಯಾಚಿಸಬೇಕು ಎಂದು ಹಠಹಿಡಿದಿವೆ. |