ಮುಂಬೈ ಉಗ್ರಗಾಮಿ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನವು 'ತಕ್ಷಣ ಮತ್ತು ದೃಢ' ಕಾರ್ಯಕೈಗೊಳ್ಳಬೇಕು ಹಾಗೂ 'ಸಂಪೂರ್ಣ ಮತ್ತು ಪಾರದರ್ಶಕವಾಗಿ' ಸಹಕರಿಸಬೇಕು ಎಂದು ಬುಧವಾರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಹೇಳಿದ್ದಾರೆ.ಭಾರತದ ರಾಜಧಾನಿಗೆ ಒಂದು ದಿನದ ಭೇಟಿಗಾಗಿ ಆಗಮಿಸಿರುವ ರೈಸ್, ಪಾಕಿಸ್ತಾನವು ತಕ್ಷಣ ಮತ್ತು ದೃಢತೆಯ ಕಾರ್ಯಕೈಗೊಳ್ಳುವ ಅವಶ್ಯಕತೆ ಇದೆ ಅಲ್ಲದೆ, ಭಾರತಕ್ಕೆ ಸಂಪೂರ್ಣ ಮತ್ತು ಪಾರದರ್ಶಕ ಸಹಕಾರ ನೀಡುವ ಅಗತ್ಯವಿದೆ ಎಂದು ಹೇಳಿದರು. ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದವರನ್ನು ಪಾಕಿಸ್ತಾನವು ಕಾನೂನಿನ ಚೌಕಟ್ಟಿಗೆ ತರಬೇಕು ಮತ್ತು ಇಂತಹ ದಾಳಿಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಅಮೆರಿಕ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.ಭಾರತಕ್ಕೆ ಐಕ್ಯಮತ್ಯ ತೋರ್ಪಡಿಸಲು ಮತ್ತು ಅಗತ್ಯವಿರುವ ಸಹಾಯವನ್ನು ನೀಡುವುದಕ್ಕಾಗಿ ತಾನು ಭಾರತ್ಕೆ ಭೇಟಿ ನೀಡಿರುವುದಾಗಿ ಹೇಳಿದ ರೈಸ್, ಇಂತಹ ಘಟನೆಗಳು ಮರುಕಳಿಸದಂತೆ ಖಚಿತ ಪಡಿಸಬೇಕಿದೆ ಎಂದು ರೈಸ್ ನುಡಿದರು.ದಾವೂದ್ ಇಬ್ರಾಹಿಂನಂತಹ ಕ್ರಿಮಿನಲ್‌ಗಳನ್ನು ಹಸ್ತಾಂತರಿಸಬೇಕೆಂಬ ಭಾರತದ ಒತ್ತಾಯವನ್ನು ಪಾಕಿಸ್ತಾನವು ಪರಿಗಣಿಸಬೇಕೆ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡರು.9 /11ರ ದಾಳಿಯ ಬಳಿಕ ಗಳಿಸಿರುವ ಅನುಭವವನ್ನು ಭಾರತದೊಂದಿಗೆ ಹಂಚಿಕೊಳ್ಳಲು ಅಮೆರಿಕವು ತಯಾರಿದೆ ಎಂದೂ ರೈಸ್ ಈ ಸಂದರ್ಭದಲ್ಲಿ ನುಡಿದರು.ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನತೆಯನ್ನು ಸರಳೀಕೃತಗೊಳಿಸುವ ಅಮೆರಿಕದ ತಕ್ಷಣದ ಪ್ರಯತ್ನದಂಗವಾಗಿ ರೈಸ್ ಭಾರತಕ್ಕೆ ಆಗಮಿಸಿದ್ದಾರೆ.ಭಾರತ ಪಟ್ಟಿ ನೀಡಿರುವಂತೆ 21 ಮಂದಿ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಲು ನಿರಾಕರಿಸಿರುವ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಇವರುಗಳ ವಿರುದ್ಧ ಪುರಾವೆಗಳು ದೊರೆತಲ್ಲಿ ಪಾಕಿಸ್ತಾನದ ನೆಲದಲ್ಲೇ ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಭಾರತದಲ್ಲಿ ಸೆರೆ ಸಿಕ್ಕಿರುವ ಮುಂಬೈ ದಾಳಿಯ ಉಗ್ರ ಪಾಕಿಸ್ತಾನಿ ಪ್ರಜೆ ಎಂಬ ಭಾರತದ ಹೇಳಿಕೆಯನ್ನೂ ಅವರು ಅಲ್ಲಗಳೆದಿದ್ದಾರೆ. ಅಲ್ಲದೆ ಕೇವಲ ಪೊಲೀಸರ ಹೇಳಿಕೆಯ ಆಧಾರದಲ್ಲಿ ಇವರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. |