ನವೆಂಬರ್ 26ರಂದು ರಾಷ್ಟ್ರವನ್ನೇ ನಡುಗಿಸಿದ ಮುಂಬೈ ದಾಳಿಯನ್ನು ಸೆಪ್ಟೆಂಬರ್ 27ರಂದು ನಡೆಸಲು ನಿರ್ಧರಿಸಲಾಗಿತ್ತಂತೆ. ಬಳಿಕ ಲಷ್ಕರ್-ಇ-ತೋಯ್ಬದ ರೂವಾರಿ ಝಕೀರ್ ಇದ್ದಕ್ಕಿದ್ದಂತೆ ಯೋಜನೆಯನ್ನು ಬದಲಿಸಿದ ಎಂಬುದಾಗಿ ಸೆರೆಸಿಕ್ಕಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ತನಿಖೆಯ ವೇಳೆಗೆ ಹೇಳಿದ್ದಾನೆಂದು ವರದಿಯಾಗಿದೆ.
ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ದಾಳಿ ನಡೆಸಿದ ಲಷ್ಕರೆ ಜಿಹಾದಿ ಅಬು ಹಂಜಾ, ತನ್ನದೆ ಉದಾಹರಣೆ ನೀಡಿ, ದಾಳಿಯ ಬಳಿಕ ಪಾರಾಗಿ ಬರಬಹುದು ಎಂಬ ಭರವಸೆ ತುಂಬಿದ್ದ ಎಂದೂ ಹೇಳಿದ್ದಾನೆ.
ಮುಂಬೈಯಲ್ಲಿ ದೆಹಲಿ ಸ್ಫೋಟದ ಬಳಿಕ ಸೆಪ್ಟಂಬರ್ 24ರಂದು ಐವರು ಇಂಡಿಯನ್ ಮುಜಾಹಿದೀನ್ ಸದಸ್ಯರು ಬಂಧನಕ್ಕೀಡಾಗಿರುವ ಕಾರಣ ಪೊಲೀಸ್ ಕಟ್ಟೆಚ್ಚರ ಹೆಚ್ಚಿರುವ ಕಾರಣ ಕಾರ್ಯಾಚರಣೆಯನ್ನು ಲಷ್ಕರೆ ಬಾಸ್‌ಗಳು ಮತ್ತು ಐಎಸ್ಐ ನಿಭಾವಕರು ಮುಂದೂಡಿದರು. ಜಾಕೀರ್(47) ಮತ್ತು ಆತನ ಸಹಾಯಕ ಕಾಫ(30) ಮುಂಬೈದಾಳಿಯನ್ನು ರಂಜಾನ್‌ನ 27ನೆ ದಿನ ಅಂದರೆ ಸೆಪ್ಟೆಂಬರ್ 27ರಂದು ನಡೆಸಲು ಉಗ್ರರಿಗೆ ಆದೇಶ ನೀಡಿದ್ದ. ಆದರೆ ರಾಷ್ಟ್ರದ ಹಲವು ಭಾಗಗಳಲ್ಲಿ ಐಎಂ ಸದಸ್ಯರ ಬಂಧನವಾಗಿರುವ ಹಿನ್ನೆಲೆಯಲ್ಲಿ ಯೋಜನೆಯಲ್ಲಿ ಬದಲಾಗಿತ್ತು ಎಂದು ಅಜ್ಮಲ್ ತಿಳಿಸಿದ್ದಾನೆ.
ಸಮುದ್ರಮಾರ್ಗವಾಗಿ ಬರುವ ಲಷ್ಕರೆ ಉಗ್ರರು ಮುಂಬೈ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂಬುದಾಗಿ ರಾ ನೀಡಿರುವ ಗುಪ್ತಚರ ಎಚ್ಚರಿಕೆ ಮತ್ತು ಉಗ್ರನ ಹೇಳಿಕೆಯಲ್ಲಿ ತಾಳೆ ಕಂಡುಬರುತ್ತಿದೆ.
ಯೋಜನೆಯಲ್ಲಿ ಬದಲಾವಣೆಯಾಗಿರುವ ಕಾರಣ ಉಗ್ರರು ನವೆಂಬರ್ 23ರಂದು ಲಷ್ಕರೆ ಹಡಗು ಅಲ್ ಹುಸೈನಿಯನ್ನೇರಿದ್ದು, ಹಡಗಿನಲ್ಲಿದ್ದ ಎಲ್ಲರೂ ಜಿಹಾದಿಗಳಾಗಿದ್ದರು ಎಂದು ಕಸಬ್ ಹೇಳಿದ್ದಾನೆ. ಕಠಿಣ ತರಬೇತಿ ಮುಗಿಸಿದ ಬಳಿಕ ಕರಾಚಿಯಲ್ಲಿ ಒಟ್ಟು ಸೇರಲು ಇವರ ಉಗ್ರಗಾಮಿ 'ಧನಿ'ಗಳು ಆದೇಶಿಸಿದ್ದರು. ಅವರು ಮುಂಬೈಗೆ ತೆರಳುವ ಮುನ್ನ ಕರಾಚಿಯಲ್ಲಿ ಎರಡು ತಿಂಗಳು ನೆಲೆಸಿದ್ದರು.
ಈ ತರಬೇತುಗೊಂಡ ಉಗ್ರರಿಗೆ ಯಾವುದೇ ಪತ್ರಿಕೆಗಳನ್ನು ಓದಲು ಇಲ್ಲವೇ ದೂರದರ್ಶನ ವೀಕ್ಷಿಸಲು ಅವಕಾಶ ನೀಡುತ್ತಿರಲಿಲ್ಲ. ಉರ್ದುವಿನಿಂದ ಹಿಂದಿಗೆ ಅನುವಾದ ಮಾಡಿರುವ ಪತ್ರಿಕೆಗಳನ್ನು, ಇವರ ಹಿಂದಿ ಭಾಷೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒದಗಿಸಲಾಗಿತ್ತು ಎಂದು ಕಸಬ್ ಹೇಳಿದ್ದಾನೆ.
ಸಮೀರ್ ಚೌಧರಿ ಎಂಬ ಹೆಸರಿನಲ್ಲಿ ಅಜ್ಮಲ್ ನಕಲಿ ಗುರುತು ಚೀಟಿಯನ್ನೂ ಹೊಂದಿದ್ದ. ಈ ಗುರುತಿನ ಚೀಟಿಯನ್ನು ಬೆಂಗಳೂರಿನ ಅರುಣೋದಯ ಪಿಜಿ ಕಾಲೇಜು ನೀಡಿದೆ ಎಂದು ಹೇಳಲಾಗಿದೆ. ಚೌಪಾಟಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿರುವ ಇನ್ನೊಬ್ಬ ಉಗ್ರ ಇಸ್ಮಾಯಿಲ್ ನರೇಶ್ ವರ್ಮಾ ಎಂಬ ಹೆಸರಿನ ಗುರುತುಚೀಟಿ ಹೊಂದಿದ್ದ.
ಇಸ್ಮಾಯಿಲ್(25) ಮೀನುಗಾರಿಕಾ ಬೋಟ್ ಕುಬೇರ್‌ಅನ್ನು ಅಪಹರಿಸಿ ಅದರ ಕ್ಯಾಪ್ಟನ್ ಅಮರ್‌ಸಿನ್ಹ ಸೋಲಂಕಿಯನ್ನು ಕೊಂದು ಜಿಪಿಎಸ್ ನ್ಯಾವಿಗೇಶನ್ ಮ್ಯಾಪ್ ಸಹಾಯದಿಂದ ದೋಣಿಯನ್ನು ಮುಂಬೈಗೆ ನಡೆಸಿಕೊಂಡು ಬಂದಿದ್ದಾನೆ ಎಂದು ಅಜ್ಮಲ್ ತಿಳಿಸಿದ್ದಾನೆ. ಅಲ್ಲದೆ, 10 ಮಂದಿ ಜಿಹಾದಿ ತಂಡದೊಂದಿಗೆ ಲಷ್ಕರೆ ಹಡಗು ಅಲ್ ಹುಸೈನಿಯಲ್ಲಿ ಇತರ ಐದು ಮಂದಿ ಇದ್ದರು. ಕುಬೇರ್ ಹಾಗೂ ಅದರ ಸಿಬ್ಬಂದಿಗಳ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಲಷ್ಕರೆಯ ಉಳಿದ ಐವರು ಮರಳಿ, ಜಿಹಾದಿಗಳು ಮಾತ್ರ ಮುಂಬೈಗೆ ಬಂದಿಳಿದಿದ್ದರು.
ಕುಬೇರ್ ಬೋಟಿನಲ್ಲಿದ್ದ ನಾಲ್ವರು 'ಬಕ್ರಾ'ಗಳನ್ನು ಕೊಂದಿರುವುದಾಗಿ ಹೇಳಿದ್ದ ಇತರ ಐವರು ಸೋಲಂಕಿಯನ್ನು ಬಳಿಕ ಕೊಂದು ಹಾಕುವಂತೆ ಇಸ್ಮಾಯಿಲ್‌ಗೆ ತಿಳಿಸಿದ್ದರೆಂದು ಅಜ್ಮಲ್ ಹೇಳಿದ್ದಾನೆ.
ಕಿಸೆಗಳ್ಳನಾಗಿದ್ದ ಅಜ್ಮಲ್ ಸೆರೆಸಿಕ್ಕಿರುವ ಉಗ್ರ ಅತ್ಯಂತ ಬಡಕುಟುಂಬದವನಾಗಿದ್ದು, ಲಷ್ಕರೆ ತಂಡಕ್ಕೆ ಸೇರಲು ಬಡತನವೆ ಕಾರಣ. ಕಷ್ಟಕರ ಬಾಲ್ಯವನ್ನು ಕಳೆದಿದ್ದ ಅಜ್ಮಲ್ ಕೈಗೆ ಲಷ್ಕರೆ ಸೇರುವಂತೆ ಕರೆನೀಡಿರುವ ಕರಪತ್ರ ಸಿಕ್ಕಿದ್ದು, ಬಳಿಕ ಲಷ್ಕರೆ ಸೇರಿದ್ದ ಈತ ಕಠಿಣ ತರಬೇತಿಯ ಬಳಿಕ ಮುಂಬೈ ಹಾದಿ ಹಿಡಿದಿದ್ದ.
ಅಜ್ಮಲ್ ಐವರು ಮಕ್ಕಳಲ್ಲಿ ಒಬ್ಬ. ಆತನ ತಂದೆ ಮೊಹಮ್ಮಜ್ ಅಮೀರ್ ಫರೀದ್‌ಕೋಟ್‌ನಲ್ಲಿ ಗಾಡಿ ಎಳೆಯುತ್ತಾನೆ. ಆತನ ಅಣ್ಣ ಅಫ್ಜಲ್ ಲಾಹೋರ್‌ನಲ್ಲಿ ಕಾರ್ಮಿಕ. ತಾಯಿ ಗೃಹಿಣಿ. ತಂಗಿ ಮತ್ತು ತಮ್ಮನೊಬ್ಬ ಫರೀದ್‌ಕೋಟ್‌ನಲ್ಲಿ ಹೆತ್ತವರೊಂದಿಗೆ ನೆಲೆಸಿದ್ದಾರೆ ಎಂದು ಬಂಧಿತ ಹೇಳಿದ್ದಾನೆ ಎಂದು ಮುಂಬೈ ಎಟಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಡತನದಿಂದಾಗಿ ಅಜ್ಮಲ್ 2005ರಲ್ಲಿ ಮನೆಬಿಟ್ಟಿದ್ದು ಲಾಹೋರಿಗೆ ತೆರಳಿದ್ದ. ಆತ ಉಗ್ರರೊಂದಿಗೆ ಸೇರಿದ ಬಳಿಕ ಆತನ ಮನೆಗೆ ಒಂದೂವರೆ ಲಕ್ಷ ರೂಪಾಯಿ ನೀಡಲಾಗಿತ್ತು ಎಂದು ತನಿಖೆಯ ವೇಳೆ ಹೇಳಿದ್ದಾನೆ.
ತನ್ನನ್ನು ಕೊಂದು ಬಿಡಿ. ಇಲ್ಲವಾದರೆ ನನ್ನ ಮನೆಯವರನ್ನು ಲಷ್ಕರೆ ಕೊಂದು ಹಾಕುತ್ತದೆ ಎಂಬುದಾಗಿ ಅಜ್ಮಲ್ ಪೊಲೀಸರನ್ನು ವಿನಂತಿಸಿದ್ದಾನೆನ್ನಲಾಗಿದೆ. |