ಮುಂಬೈ ದಾಳಿ ನಡೆಸಿರುವ ಉಗ್ರರಿಗೆ ತರಬೇತಿಯ ನೀಡಿದ ವೇಳೆಗೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ವಿಶ್ವಹಿಂದೂ ಪರಿಷತ್‌ನ ಪ್ರವೀಣ್ ತೊಗಾಡಿಯಾ ಅವರುಗಳು ಜಿಹಾದ್ ಮತ್ತು ಪಾಕಿಸ್ತಾನದ ವಿರುದ್ಧ 'ದ್ವೇಷ ಕಾರುವ' ವಿಡಿಯೋ ತುಣುಕುಗಳನ್ನು, ಉತ್ತೇಜಕ ಅಂಶಗಳಾಗಿ ತೋರಿಸಲಾಗಿತ್ತು ಎಂದು ಸೆರೆ ಸಿಕ್ಕಿರುವ ಉಗ್ರ ಅಜ್ಮಲ್ ಅಮೀರ್ ಕಸಬ್ ತನಿಖೆಯ ವೇಳೆಗೆ ತಿಳಿಸಿದ್ದಾನೆ.ಅಲ್ಲದೆ ಗುಜರಾತ್ ಹತ್ಯಾಕಾಂಡ ಮತ್ತು ಮುಸ್ಲಿಮರ ಮೇಲಿನ ದೌರ್ಜನ್ಯವನ್ನೂ ಅವರಿಗೆ ತೋರಿಸಲಾಗಿತ್ತಂತೆ.ಫಿದಾಯಿನ್ ದಾಳಿ ನಡೆಸಲು ಆತ ಕಠಿಣ ತರಬೇತಿಗೆ ಒಳಗಾಗಿದ್ದ. ತರಬೇತಿಯ ವೇಳೆ ತರಬೇತುದಾರರು ಯಾವುದೇ ತನಿಖೆಯ ವೇಳೆಗೆ ಬಾಯಿಬಿಡದಂತೆ ಇವರನ್ನು ತಯ್ಯಾರಿನಡೆಸುವ ಸಲುವಾಗಿ ಸಿಕ್ಕಾಪಟ್ಟೆ ಥಳಿಸುತ್ತಿದ್ದರೂ ಎಂದೂ ಇಗ್ರ ಹೇಳಿರುವುದಾಗಿ ತನಿಖಾ ತಂಡದ ಮೂಲಗಳು ತಿಳಿಸಿವೆ.ಮುಂಬೈ ದಾಳಿಯಲ್ಲಿ ಪಾಲ್ಗೊಂಡು ಹಲವಾರು ಕಡೆಗಳಲ್ಲಿ ಸತ್ತು ಮಲಗಿದ ಇತರ ಒಂಬತ್ತು ಮಂದಿ ಉಗ್ರರ ಹೆಸರನ್ನೂ ಆತ ಬಹಿರಂಗ ಪಡಿಸಿದ್ದಾನೆ. ಇವರಲ್ಲಿ ಅತಿಕಿರಿಯ 20ರ ಹರೆಯದವನಾಗಿದ್ದರೆ ಹಿರಿಯ ಫಿದಾಯಿನ್ 28ರ ಹರೆಯದವನಾಗಿದ್ದ.ಸೊಹಿಬ್(20), ಚೋಟಾ ಅಬ್ದುಲ್ ರೆಹ್ಮಾನ್(21), ಉಮರ್(22), ಅಬು ಅಲಿ(23), ಫಹದುಲ್ಲ(24), ಇಸ್ಮಾಯಿಲ್ ಖಾನ್(25), ಬಡಾ ಅಬ್ದುಲ್ ರೆಹ್ಮಾನ್(25), ಅಬು ಅಕಾಸ(26) ಮತ್ತು ಉಮೈರ್ (28) ಇತರ ಒಂಬತ್ತು ಉಗ್ರರು. ಇವರಲ್ಲಿ ಫಹದುಲ್ಲ ಅಂಗವಿಕಲನಾಗಿದ್ದ ಎಂದು ಅಜ್ಮಲ್‌ನ ವಿಚಾರಣೆ ನಡೆಸಿರುವ ಪೊಲೀಸ್ ತಿಳಿಸಿದ್ದಾರೆಂದು ಹೇಳಲಾಗಿದೆ.ಇವರಿಗೆ ವಿವಿಧ ಗುಂಪುಗಳಾಗಿ, ವಿವಿಧೆಡೆ ತರಬೇತಿ ನೀಡಲಾಗಿತ್ತು. ತರಬೇತಿಯ ಬಳಿಕ ಇವರೆಲ್ಲ ಕರಾಚಿಯಲ್ಲಿ ಒಟ್ಟಾಗಿದ್ದರು. ಈ ಮೊದಲು ಅವರು ಎಂದಿಗೂ ಪರಸ್ಪರ ಭೇಟಿಯಾಗಿರಲಿಲ್ಲ ಸೆಪ್ಟಂಬರ್ ತಿಂಗಳಲ್ಲಿ ಅವರು ಮೊದಲ ಬಾರಿಗೆ ಭೇಟಿಯಾಗಿದ್ದರು.ಹಲವು ಹಂತಗಳಲ್ಲಿ ಹಲವು ಮಂದಿ ತರಬೇತಿ ನೀಡಿದ್ದರು ಮತ್ತು ಲಷ್ಕರೆಯ ಜಾಕೀರ್ ರಹ್ಮಾನ್ ಅಲಿಯಾಸ್ ಚಾಚೂ ಇವರ ಮಾರ್ಗದರ್ಶಿಯಾಗಿದ್ದ. ಮುಫ್ತಿ ಸಯೀದ್, ಫಹದುಲ್ಲ, ಉಸ್ತಾದ್ ಅಬ್ದುಲ್ ರೆಹ್ಮಾನ್ ಮತ್ತು ಅಬು ಅನುಸ್ ಇತರ ಕೆಲವು ತರಬೇತುದಾರರು. ಇವರೆಲ್ಲ ನೌಕಾ ತರಬೇತಿ ಮತ್ತು ಶಸ್ತಾಸ್ತ್ರ ಹಾಗೂ ಗ್ರೆನೇಡುಗಳನ್ನು ಹೇಗೆ ಬಳಸಬೇಕು ಎಂಬ ತರಬೇತಿಯನ್ನು ನೀಡಿದ್ದರಂತೆ. ಇವರಿಗೆ ತರಬೇತಿ ನೀಡಿದವರಲ್ಲಿ ಹೆಚ್ಚಿನರು ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿಗಳು. ಇವರು ಐಎಸ್ಐ ಸಹಯೋಗದಲ್ಲಿ ಲಷ್ಕರೆ ಶಿಬಿರಗಳಲ್ಲಿ ತರಬೇತು ನೀಡುತ್ತಿದ್ದರು ಎಂದು ತನಿಖಾಧಿಕಾರಿಗಳು ಹೇಳಿರುವುದಾಗಿ ವರದಿ ತಿಳಿಸಿದೆ.ಉಗ್ರರು ಮುಂಬೈ ಹಡಗನ್ನೇರುವ ಮುನ್ನ ಅತ್ಯಂತ ಸುದೀರ್ಘ ಹಾಗೂ ಕಠಿಣ ತರಬೇತಿ ಪಡೆದಿದ್ದರು. ಇವರ ತರಬೇತಿಯನ್ನು ಕಳೆದ ಡಿಸೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಪಿಪಿಪಿ ನಾಯಕಿ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಬಳಿಕ ತರಬೇತಿಯನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು ಎಂದು ಉಗ್ರ ಅಜ್ಮಲ್ ಅಮೀರ್ ಕಸಬ್ ಹೇಳಿದ್ದಾನೆ. |