ಮುಂಬೈ ದಾಳಿಕೋರರಿಗೆ ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿಗಳು ತರಬೇತಿ ನೀಡಿದ್ದಾರೆ ಎಂದು ಅನಾಮಧೇಯ ಪೆಂಟಾಗಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ಪಾಕಿಸ್ತಾನದ ಮಾಜಿ ಸೇನಾಧಿಕಾರಿಗಳು ಮತ್ತು ಅಲ್ಲಿನ ಶಕ್ತಿಶಾಲಿ ಗುಪ್ತಚರ ಸಂಸ್ಥೆಯ ಐಎಸ್ಐ ಮುಂಬೈದಾಳಿ ನಡೆಸಿರುವ ಉಗ್ರರಿಗೆ ತರಬೇತಿ ನೀಡಿದ್ದಾರೆ ಎಂದು ಆಮೆರಿಕ ಗುಪ್ತಚರ ಏಜೆನ್ಸಿಗಳು ಖಚಿತಪಡಿಸಿವೆ ಎಂದು ಮಾಜಿ ರಕ್ಷಣಾ ಇಲಾಖೆಯ ಅಧಿಕಾರಿ ಬುಧವಾರ ಹೇಳಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ವಾಶಿಂಗ್ಟನ್‌ನಿಂದ ವರದಿ ಮಾಡಿದೆ.ಅನಾಮಧೇಯ ಷರತ್ತಿನೊಂದಿಗೆ ಮಾತನಾಡಿರುವ ಅಧಿಕಾರಿ, ಉಗ್ರರು ಮತ್ತು ಪಾಕಿಸ್ತಾನ ಸರಕಾರದ ನಡುವೆ ನಿರ್ದಿಷ್ಟ ಸಂಪರ್ಕಗಳು ಇದುವರೆಗೆ ಪತ್ತೆಯಾಗಿಲ್ಲ ಎಂದು ಹೇಳಿದ್ದು ಹೆಚ್ಚಿನ ವಿವರಗಳನ್ನು ನೀಡಿಲ್ಲ.ಪಾಕಿಸ್ತಾನ ಇದುವರೆಗೆ ಭಾರತದ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದೆ. ಇದೀಗ ಈ ವರದಿಯು ಭಾರತದ ಆರೋಪಕ್ಕೆ ಬಲನೀಡಿದಂತಾಗಿದೆ. ಮುಂಬೈ ಉಗ್ರರು ನಡೆಸಿರುವ ಮಾರಣಾಂತಿಕ ದಾಳಿಯಲ್ಲಿ ವಿದೇಶಿಯರು ಪೊಲೀಸ್, ಎನ್ಎಸ್‌ಜಿ ಅಧಿಕಾರಿಗಳು ಸೇರಿದಂತೆ 183 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. |