ದ್ವೇಷ ಭಾವನೆಯನ್ನು ಹೊಡೆದೋಡಿಸುವಂತಹ ರಾಜಕೀಯ ಪಕ್ಷವೊಂದನ್ನು ಕಟ್ಟಲು ಬಾಲಿವುಡ್ ತಾರೆ ಅಮೀರ್ ಖಾನ್ ದೇಶದ ಯುವಕರಿಗೆ ಕರೆ ನೀಡಿದ್ದಾರೆ.ಸುದೃಢ, ಪರಿಶುದ್ಧ, ಪ್ರಾಮಾಣಿಕ ಮತ್ತು ತಾಜಾ ನಾಯಕತ್ವದ, ನಾವೆಲ್ಲರೂ ಬೆಂಬಲ ನೀಡುವಂತಹ ಪಕ್ಷವೊಂದನ್ನು ನಮ್ಮ ಯುವಕರು ಹುಟ್ಟುಹಾಕುವುದನ್ನು ಕಾಣಲು ತಾನು ಇಚ್ಚಿಸುವುದಾಗಿ ಅವರು ಬುಧವಾರ ತನ್ನ ಬ್ಲಾಗಿನಲ್ಲಿ ಬರೆದಿದ್ದಾರೆ.ಭಯೋತ್ಪಾದಕರ ದಾಳಿಯನ್ನು ವಿಫಲಗೊಳಿಸಬೇಕಾದರೆ, ಈ ದಾಳಿಗಳು ನಮ್ಮೊಳಗೆ ದ್ವೇಷಭಾವನೆ ಹುಟ್ಟುಹಾಕಬಾರದು, ಬದಲಿಗೆ ಪರಸ್ಪರರಲ್ಲಿ ಪ್ರೀತಿಯನ್ನು ಬೆಳೆಸಬೇಕು ಎಂದು ಅವರು ಹೇಳಿದ್ದಾರೆ. ಭಯೋತ್ಪಾದನಾ ದಾಳಿಗಳಿಂದ ನಾವು ಕಲಿಯಬೇಕಿರುವ ಬಹುದೊಡ್ಡ ಪಾಠವೆಂದರೆ, ಸರಕಾವು ಎಂದಿಗೂ ಭಯೋತ್ಪಾದಕರೊಂದಿಗೆ ಮಾತುಕತೆಗೆ ಮುಂದಾಗಬಾರದು ಮತ್ತು ಅವರಿಗೆ ಬಗ್ಗಬಾರದು. ಭಾರತವು ಉಗ್ರರೊಂದಿಗೆ ಸಂಧಾನ ನಡೆಸುವುದಿಲ್ಲ ಎಂಬ ಸಂದೇಶವು ಉಗ್ರರಿಗೆ ರವಾನೆಯಾಗಬೇಕಾಗಿದೆ. "ಒಂದೊಮ್ಮೆ ನನ್ನ ಮಕ್ಕಳನ್ನು ಉಗ್ರರು ಒತ್ತೆಯಾಳುಗಳಾಗಿ ಇರಿಸಿಕೊಂಡರೆ, ನಾನು ದೇಶದ ಬಹುದೊಡ್ಡ ಸಮುದಾಯಕ್ಕಾಗಿ ನನ್ನ ಪ್ರೀತಿಪಾತ್ರರನ್ನು ಕಳೆದುಕೊಳ್ಳಲು ಸಿದ್ಧವಾಗಬೇಕು. ಎಂದಿಗೂ ಭಯೋತ್ಪಾದಕರ ಒತ್ತಡಕ್ಕೆ ಮಣಿಯಬಾರದು" ಎಂಬ ಅತ್ಯಂತ ಸೂಕ್ಷ್ಮ ಸಲಹೆಯನ್ನು ಅವರು ತನ್ನ ಬ್ಲಾಗಿನಲ್ಲಿ ನೀಡಿದ್ದಾರೆ.ಭಯೋತ್ಪಾದಕರ ದಾಳಿಯನ್ನು ನಿಭಾಯಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ರಾಜಕೀಯ ಪಕ್ಷಗಳ ವೈಫಲ್ಯವನ್ನು ದೂರಿರುವ ಅವರು ಅತ್ಯಂತ ಸ್ಪಷ್ಟವಾಗಿ ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ಭಯೋತ್ಪಾದನೆಯನ್ನು ನಿಭಾಯಿಸುವಲ್ಲಿ ವಿಫಲವಾಗಿವೆ. ಎರಡೂ ಪಕ್ಷಗಳ ಆಡಳಿತದಲ್ಲೂ ದಾಳಿಗಳಾಗಿವೆ. ಅವರಿಗೆ ದಾಳಿಯನ್ನು ಮೊದಲೇ ಗ್ರಹಿಸಲು ಮತ್ತು ದಾಳಿಯನ್ನು ನಿಭಾಯಿಸಲೂ ಸಾಧ್ಯವಿಲ್ಲ ಎಂಬ ಕಟು ಟೀಕೆ ಮಾಡಿದ್ದಾರೆ.ನಿಮಗೆ ನಿಜವಾಗಿಯೂ ಬದಲಾವಣೆ ಬೇಕಿದ್ದರೆ ಮೊದಲು ನೀವು ಬದಲಾಗಿ ಎಂದು ಅಮೀರ್ ಹೇಳಿದ್ದಾರೆ. |