ನವದೆಹಲಿ: ಮುಂಬೈಯಲ್ಲಿ ಉಗ್ರರು ನಡೆಸಿರುವ ವಿಧ್ವಂಸಕ ಕೃತ್ಯಗಳಿಗೂ ಲಷ್ಕರ್-ಇ-ತೊಯ್ಬಾ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಲಷ್ಕರೆ ಮುಖ್ಯಸ್ಥ ಹಫೀಜ್ ಮೊಹ್ಮದ್ ಸಯೀದ್ ಸ್ಪಷ್ಟಪಡಿಸಿದ್ದಾನೆ. ಭಾರತದ ಬೇಹುಗಾರಿಕೆ ಇಲಾಖೆಯು ಉಗ್ರರರ ಜಾಡನ್ನು ಪತ್ತೆಹಚ್ಚುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಪ್ರತಿಭಾರಿಯೂ ಅಲ್ಲಿ ದಾಳಿ ನಡೆದಾಗ ತಮ್ಮತ್ತ ಬೆಟ್ಟು ಮಾಡಲಾಗುತ್ತಿದೆ ಎಂದು ಹೇಳಿದ್ದಾನೆ.
"ಔಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಭಾರತೀಯ ಭದ್ರತಾ ವೈಫಲ್ಯವನ್ನು ಎತ್ತಿ ಆಡಿರುವ ಸಯೀದ್, ಸರ್ಕಾರ ತನ್ನ ಭದ್ರತಾ ವೈಫಲ್ಯವನ್ನು ಮರೆಮಾಚಲು ಪಾಕಿಸ್ತಾನದ ಮೇಲೆ ಗೂಬೆ ಕೂರಿಸುತ್ತಿದ್ದು, ಲಷ್ಕರೆ ಸಂಘಟನೆ ಮೇಲೂ ಸಂಶಯ ವ್ಯಕ್ತಪಡಿಸಿದೆ. ಆದರೆ ಮುಂಬೈ ಘಟನೆಗೂ ನಮ್ಮ ಸಂಘಟನೆಗೂ ಯಾವ ರೀತಿಯಲ್ಲೂ ಸಂಬಂಧವಿಲ್ಲ" ಎಂದು ಸಯೀದ್ ಭಾರತದ ಆರೋಪವನ್ನು ನಿರಾಕರಿಸಿದ್ದಾನೆ.
ಈ ಮಧ್ಯೆ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ ಲಷ್ಕರ್ ಇ ತೊಯ್ಬಾ ಸಂಘಟನೆ ವಕ್ತಾರ ಕೂಡಾ ಮುಂಬೈ ಭಯೋತ್ಪಾದನೆಯನ್ನು ಅಲ್ಲಗಳೆದಿದ್ದು, ಲಷ್ಕರೆ ಸಂಘಟನೆ ಕಾಶ್ಮೀರದ ಸ್ವತಂತ್ರಕ್ಕಾಗಿ ಹೋರಾಟ ನಡೆಸುತ್ತೇವೆಯೇ ಹೊರತು ಸಾರ್ವಜನಿಕರ ಜೀವ ಹಾನಿ ಮಾಡುವಂತ ಕೃತ್ಯಕ್ಕೆ ಇಳಿಯುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. |