ಈ ಬಾರಿಯ ಬಕ್ರೀದ್ ಹಬ್ಬದ(ನ.9) ದಿನದಂದು ಗೋ ಹತ್ಯೆ ಬೇಡ, ಆ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗೆ ಗೌರವ ನೀಡಿ ಎಂದು ಇಸ್ಲಾಮ್‌ನ ಪ್ರತಿಷ್ಠಿತ ಮಂಡಳಿಯಾದ ದಾರ್ ಉಲ್ ಉಲೂಮ್ ದೇಶದ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದೆ.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಮಡಿದ ನಾಗರಿಕರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಬಕ್ರೀದ್ ದಿನಾಚರಣೆಯಂದು ಮುಸ್ಲಿಂ ಸಮುದಾಯ ತೋಳಿಗೆ ಕಪ್ಪು ರಿಬ್ಬನ್ ಕಟ್ಟಿಕೊಳ್ಳುವ ಮೂಲಕ ಸಂತಾಪ ಸೂಚಿಸಬೇಕೆಂದೂ ಅದು ಸೂಚಿಸಿದೆ. ಈ ಮನವಿಯನ್ನು ಆಲ್ ಇಂಡಿಯಾ ಆರ್ಗನೈಜೇಶನ್ ಆಫ್ ಇಮಾಮ್ ಆಫ್ ಮಾಸ್ಕ್(ಎಐಒಐಎಂ) ಕೂಡ ಬೆಂಬಲಿಸಿದೆ.
ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾದ ಬಕ್ರೀದ್ ಆಚರಣೆಯ ಸಂದರ್ಭದಲ್ಲಿನ ಕುರ್ಬಾನಿ ಕುರಿತಾಗಿ ದಿಯೋಬಂದ್ ಮೂಲದ ದಾರ್ ಉಲ್ ಉಲೂಮ್ ಬುಕ್‌ಲೆಟ್‌ವೊಂದನ್ನು ಬಿಡುಗಡೆ ಮಾಡಿದ್ದು, ದನದ ಹತ್ಯೆಯನ್ನು ಮಾಡದಿರುವ ಮೂಲಕ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಗೌರವಿಸಬೇಕು ಎಂದು ವಿನಂತಿಸಿಕೊಂಡಿದೆ.
ಆದರೆ ಹಬ್ಬದ ಆಚರಣೆಯಲ್ಲಿ ಗೋವನ್ನು ಹೊರತುಪಡಿಸಿ, ಮುಸ್ಲಿಂ ಸಮುದಾಯ ಬೇರೆ ಪ್ರಾಣಿಗಳನ್ನು ವಧಿಸಬಹುದು ಎಂದು ಬುಕ್‌ಲೆಟ್‌ನಲ್ಲಿ ತಿಳಿಸಿದ್ದು, ಆ ನಿಟ್ಟಿನಲ್ಲಿ ಮುಸ್ಲಿಂರು ಭಾರತೀಯ ಇತರ ಸಮುದಾಯದ ಭಾವನೆಗಳನ್ನು ಗೌರವಿಸಬೇಕೆಂದು ಕೇಳಿಕೊಂಡಿದೆ. |