ರಾಜಕಾರಣಿಗಳು ವಿವಿಧೆಡೆಯಿಂದ ಆಕ್ರೋಶಕ್ಕೆ ಗುರಿಯಾಗುತ್ತಿರುವಂತೆಯೇ, ಕೇರಳದ ಸಂಸದರಿಬ್ಬರು ತಮ್ಮ ಅಧಿಕಾರ ದುರುಪಯೋಗದಿಂದಾಗಿ ಮತ್ತೆ ಜನತೆಯ ಕೋಪಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ದೆಹಲಿ-ಕೊಚ್ಚಿನ್ ಇಂಡಯನ್ ಏರ್‌ಲೈನ್ಸ್ ವಿಮಾನವು ನಾಲ್ಕು ಗಂಟೆ ವಿಳಂಬವಾಗಿ ಹೊರಡಬೇಕಾಯಿತು.
ಶುಕ್ರವಾರ ಸಂಜೆ 5.30ರ ಹೊತ್ತಿಗೆ ವಿಮಾನ ಇನ್ನೇನು ಹೊರಡಬೇಕೆಂಬಷ್ಟರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ, ಪ್ರಯಾಣಿಕರೆಲ್ಲರೂ ವಿಮಾನದಿಂದ ಕೆಳಗಿಳಿಯುವಂತೆ ಮನವಿ ಮಾಡಲಾಯಿತು. ತಾಂತ್ರಿಕ ಸಮಸ್ಯೆ ಸರಿಪಡಿಸುವುದಕ್ಕಾಗಿ 6.30ಕ್ಕೆ ವಿಮಾನ ಯಾನ ಮರುನಿಗದಿಗೊಳಿಸಲಾಯಿತು.
ಆದರೆ ತಾಂತ್ರಿಕ ದೋಷ ಸರಿಪಡಿಸಲು ಮತ್ತಷ್ಟು ಸಮಯ ಬೇಕಾಗಿದ್ದುದರಿಂದ, ಬೇರೊಂದು ವಿಮಾನದ ವ್ಯವಸ್ಥೆ ಮಾಡಿ, ದೋಷವುಳ್ಳ ವಿಮಾನವನ್ನು ಪಾರ್ಕಿಂಗ್ ಪ್ರದೇಶಕ್ಕೆ ತರಲಾಯಿತು. 144 ಪ್ರಯಾಣಿಕರ ಬ್ಯಾಗೇಜ್‌ಗಳನ್ನೂ ಬೇರೆ ವಿಮಾನಕ್ಕೆ ಸಾಗಿಸಲಾಯಿತು.
ದಯವಿಟ್ಟು ಎಲ್ಲರೂ ಕೆಳಗಿಳಿದು ಬೇರೆ ವಿಮಾನ ಏರುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಯಿತು. ಎಲ್ಲರೂ ಇಳಿದರಾದರೂ ಕೇರಳದ ಸಿಪಿಎಂ ಸಂಸದರಾದ ವರ್ಕಳ ರಾಧಾಕೃಷ್ಣನ್ ಹಾಗೂ ಡಾ.ಕೆ.ಎಸ್.ಮನೋಜ್ ಅವರು ಕೆಳಗಿಳಿಯಲು ಒಪ್ಪಲಿಲ್ಲ. ಅವರಿಬ್ಬರೂ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರ ಕಚೇರಿಗೆ, ಏರ್ ಇಂಡಿಯಾ ಅಧಿಕಾರಿಗಳಿಗೆ ಫೋನ್ ಮಾಡಿದರು. ಮತ್ತು ತೊಂದರೆಗಾಗಿ ಏರ್‌ಲೈನ್ಸ್ ಕ್ಷಮೆ ಯಾಚಿಸುವವರೆಗೂ ಅದರೊಳಗೆ ಧರಣಿ ಕೂರುವುದಾಗಿ ಪಟ್ಟು ಹಿಡಿದರು.
ಆದರೆ ಏರ್‌ಲೈನ್ಸ್ ಅಧಿಕಾರಿಗಳು ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಈ ಇಬ್ಬರು ಸಂಸದರನ್ನು ಅಲ್ಲೇ ಬಿಟ್ಟು ಪರ್ಯಾಯ ವಿಮಾನದ ಹಾರಾಟ ಆರಂಭಿಸಲು ನಿರ್ಧರಿಸಿದರು. ಆದರೆ, ಈ ಸಂಸದರು ಪಟ್ಟು ಹಿಡಿದದ್ದರಿಂದಾಗಿ ವಿಮಾನವು ಇನ್ನೂ ನಾಲ್ಕು ಗಂಟೆಗಳ ಕಾಲ ವಿಳಂಬವಾಗಿ ಅಂದರೆ ರಾತ್ರಿ 10.15ಕ್ಕೆ ಹೊರಡಬೇಕಾಯಿತು ಎಂದು ಮೂಲಗಳು ತಿಳಿಸಿವೆ. |