ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ 16ನೇ ವರ್ಷದ ಕರಾಳ ದಿನಾಚರಣೆಯನ್ನು ಶನಿವಾರ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಮುಖ ನಗರ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಉತ್ತರಪ್ರದೇಶದಲ್ಲಿ ಬಾಬ್ರಿ ಮಸೀದಿ ಧ್ವಂಸದ ಪ್ರಯುಕ್ತ ಮುಸ್ಲಿಂ ಸಮುದಾಯ ಕರಾಳ ದಿನಾಚರಣೆ ಆಚರಿಸುತ್ತಿದ್ದು, ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಶಾಂತಿ ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆ ಕಾಪಾಡುವಂತೆ ಗೃಹ ಇಲಾಖೆ ಸೂಚನೆ ನೀಡಿದೆ.
ಕರಾಳ ದಿನಾಚರಣೆ ಇಲ್ಲ: ಏತನ್ಮಧ್ಯೆ ಬಾಬ್ರಿ ಮಸೀದಿ ಪುನರ್ ನಿರ್ಮಾಣ ಹೋರಾಟ ಸಮಿತಿ ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಕರಾಳ ದಿನಾಚರಣೆಯನ್ನು ಕೈಬಿಟ್ಟಿದ್ದು, ದಾಳಿಯಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಸಲ್ಲಿಸುವುದಾಗಿ ಹೇಳಿದೆ.
ಪ್ರತಿಭಟನೆ ಬದಲಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಮನವಿಯೊಂದನ್ನು ಸಲ್ಲಿಸಿದ ಬಾಬ್ರಿ ಮಸೀದಿ ಪುನರ್ ನಿರ್ಮಾಣ ಸಮಿತಿ, ಧ್ವಂಸಗೊಂಡ ಸ್ಥಳದಲ್ಲೇ ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲ ವಿವಾದ,ಪ್ರಕರಣಗಳನ್ನು ಸುಪ್ರೀಂಕೋರ್ಟ್‌ಗೆ ಒಪ್ಪಿಸಬೇಕೆಂದು ಒತ್ತಾಯಿಸಿದೆ.
ಈ ಹಿನ್ನೆಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಂಡ 16ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ನಾವು ಯಾವುದೇ ಪ್ರತಿಭಟನೆ ನಡೆಸುತ್ತಿಲ್ಲ, ಆದರೆ ಮಸೀದಿ ವಿವಾದಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ರಾಷ್ಟ್ರಪತಿ ಸುಪ್ರೀಂಕೋರ್ಟಗೆ ಒಪ್ಪಿಸಲಿ ಎಂದು ಬಯಸುತ್ತೇವೆ ಎಂದು ಸಮಿತಿ ಹೇಳಿದೆ. |