ಮತದಾರರಿಗೆ ನೀಡಿರುವ "ಓಟು ಹಾಕದಿರುವ ಆಯ್ಕೆ"ಯು ಚುನಾವಣೆಯ ವಿಜಯಿ ಅಭ್ಯರ್ಥಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
49-0 ನಿಯಮದ ಪ್ರಕಾರ ಮತ ಚಲಾಯಿಸದಿರುವ ತಮ್ಮ ಆಯ್ಕೆಯನ್ನು ಬಳಸಿಕೊಳ್ಳುವ ಮತದಾರರು ಮತದಾನದಿಂದ ಹೊರಗುಳಿದಿದ್ದಾರೆ ಎಂದೇ ಅರ್ಥ ಮತ್ತು ಕಾನೂನಿನ ಅನ್ವಯ, ಅತ್ಯಧಿಕ, ಸಿಂಧು ಮತಗಳನ್ನು ಪಡೆದ ಅಭ್ಯರ್ಥಿಯು, ವಿಜಯದ ಅಂತರದ ಪರಿಗಣನೆಯೇ ಇಲ್ಲದೆ, ವಿಜೇತನಾಗುತ್ತಾನೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತ ಚಲಾಯಿಸದಿರುವ ಆಯ್ಕೆಯನ್ನು ಪ್ರಯೋಗಿಸಿದ ಮತದಾರರ ಸಂಖ್ಯೆಯು, ವಿಜೇತನ ವಿಜಯದ ಅಂತರಕ್ಕಿಂತ ಹೆಚ್ಚಾಗಿದ್ದರೆ, ಅದು ಆ ಅಭ್ಯರ್ಥಿಯ ಚುನಾವಣೆಯನ್ನೇ ಅಮಾನ್ಯಗೊಳಿಸುತ್ತದೆ ಮತ್ತು ಮರು ಚುನಾವಣೆ ನಡೆಯಬೇಕಾಗುತ್ತದೆ ಎಂಬ ಕುರಿತಾದ ವರದಿಗಳ ಬಗ್ಗೆ ಆಯೋಗವು ಪ್ರತಿಕ್ರಿಯಿಸುತ್ತಾ ಈ ಅಂಶವನ್ನು ಸ್ಪಷ್ಟಪಡಿಸಿದೆ.
49-0 ನಿಯಮದ ಪ್ರಕಾರ, ಚುನಾವಣಾ ಬೂತ್‌ಗೆ ಬಂದ ಮತದಾರನೊಬ್ಬ, ಮತ ಚಲಾಯಿಸದಿರುವ ಆಯ್ಕೆಯನ್ನು ಬಳಸಿದರೆ, ಮತದಾರರ ಪಟ್ಟಿಯಲ್ಲಿ ಆತನ ಹೆಸರು ದಾಖಲಾಗುತ್ತದೆ ಆದರೆ ಮತ ಚಲಾವಣೆಯಾಗಿರುವುದಿಲ್ಲ. |