ಹಿಂದೂ ಮತ್ತು ಕ್ರಿಶ್ಚಿಯನ್ ನಡುವಣ ವಿವಾಹವು ಹಿಂದೂ ವಿವಾಹ ಕಾಯಿದೆ ಪ್ರಕಾರ ಅಸಿಂಧು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಈ ಕುರಿತು ಆಂಧ್ರ ಪ್ರದೇಶ ಹೈಕೋರ್ಟ್ ನೀಡಿರುವ ತೀರ್ಪನ್ನು ಅಲ್ತಮಸ್ ಕಬೀರ್ ಮತ್ತು ಅಫ್ತಾಬ್ ಆಲಂ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಎತ್ತಿ ಹಿಡಿದಿದೆ. ತನ್ನ ಪತಿ ಗುಲ್ಲಿಪಿಳ್ಳಿ ಶೌರ್ಯ ರಾಜ್ ಒಬ್ಬ ಕ್ರಿಶ್ಚಿಯನ್ ಆಗಿದ್ದು, ತಾನು ಹಿಂದೂ ಎಂದು ಹೇಳಿಕೊಂಡು ಮಂದಿರವೊಂದರಲ್ಲಿ ತನ್ನನ್ನು ವಿವಾಹವಾಗಿದ್ದ ಎಂದು ಬಂಡಾರು ಪಾವನಿ ಎಂಬಾಕೆ ನ್ಯಾಯಾಲಯದ ಮೊರೆ ಹೋಗಿದ್ದು, ಈ ವಿವಾಹವನ್ನು ಆಂಧ್ರ ಹೈಕೋರ್ಟ್ ರದ್ದುಪಡಿಸಿ ವಿಚ್ಛೇದನೆಗೆ ಅವಕಾಶ ನೀಡಿತ್ತು.
ರೋಮನ್ ಕ್ಯಾಥೊಲಿಕ್ ಆಗಿರುವ ರಾಜ್ 1996ರ ಅಕ್ಟೋಬರ್ 24ರಂದು ಎರಡೂ ಕಡೆಯ ಪ್ರಮುಖ ಪ್ರತಿನಿಧಿಗಳಿಲ್ಲದೆಯೇ ತಾಳಿ ಕಟ್ಟಿ ಪಾವನಿಯನ್ನು ವಿವಾಹವಾಗಿದ್ದ. ಆ ಬಳಿಕ 1996ರ ನವೆಂಬರ್ 2ರಂದು ಹಿಂದೂ ವಿವಾಹ ಕಾಯಿದೆ, 1955ರ ಸೆಕ್ಷನ್ 8ರ ಅಡಿಯಲ್ಲಿ ವಿವಾಹವನ್ನು ನೋಂದಣಿ ಮಾಡಿಸಲಾಗಿತ್ತು. ವೈವಾಹಿಕ ನ್ಯಾಯಾಲಯವು ಆಕೆಯ ವಿಚ್ಛೇದನೆ ಅರ್ಜಿ ತಳ್ಳಿ ಹಾಕಿತ್ತು. ಆದರೆ ಆಕೆಯ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟು, ಹಿಂದೂ ವಿವಾಹ ಕಾಯಿದೆಯು ಹಿಂದೂಗಳ ನಡುವಣ ವಿವಾಹವನ್ನು ಮಾತ್ರವೇ ಮಾನ್ಯ ಮಾಡುತ್ತದೆಯಾದುದರಿಂದ ಈ ವಿವಾಹ ಅಸಿಂಧು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಪತಿಯು ಸುಪ್ರೀಂ ಕೋರ್ಟಿನಲ್ಲಿ ವಿಶೇಷ ರಜಾಕಾಲದ ಅರ್ಜಿಯೊಂದನ್ನು ಸಲ್ಲಿಸಿದ್ದರು. |