ವಾಣಿಜ್ಯ ನಗರಿ ಮುಂಬೈ ಮೇಲೆ ಭಯೋತ್ಪಾದನಾ ದಾಳಿಯ ಕರಿಛಾಯೆ ಮಾಸುವ ಮುನ್ನವೇ ಇದೀಗ, ಗೋವಾದಲ್ಲಿನ ಪ್ರಮುಖ ತಾಣಗಳ ಮೇಲೆ ಅಲ್ ಕೈದಾ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗೋವಾ ಸರಕಾರ ಎಚ್ಚರಿಕೆ ನೀಡಿದೆ.
ಹಲವು ಬಾರಿ ಈ ರೀತಿಯ ಸುದ್ದಿ ಹರಡಿದ್ದರೂ, ಇದೇ ಮೊದಲ ಬಾರಿಗೆ ರಾಜ್ಯದ ಮೇಲೆ ಉಗ್ರರ ದಾಳಿಯ ಸಾಧ್ಯತೆಯನ್ನು ಸರಕಾರ ಬಹಿರಂಗವಾಗಿ ಒಪ್ಪಿಕೊಂಡಿದೆ. ಈ ಕುರಿತು ಸರಕಾರ ಸಂಪುಟದ ಎಲ್ಲಾ ಸಚಿವರಿಗೂ ಮಾಹಿತಿ ರವಾನಿಸಿದೆ.
ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ವಿವಿಧ ಪ್ರವಾಸಿ ತಾಣ ಉಗ್ರರ ಗುರಿಯಾಗುವ ಸಾಧ್ಯತೆ ಇದೆ ಎಂದು ಸರಕಾರ ಎಚ್ಚರಿಕೆ ನೀಡಿದೆ. 2006ರಲ್ಲಿ ಕಾಶ್ಮೀರ ಮೂಲದ ಶಂಕಿತ ಉಗ್ರನೊಬ್ಬನನ್ನು ಸ್ಥಳೀಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಈಗಾಗಲೇ ಹೊಸ ವರ್ಷಚರಣೆ ಸಮೀಪಿಸುತ್ತಿರುವಂತೆಯೇ ದೇಶಾದ್ಯಂತ ಉಗ್ರರ ಬೆದರಿಕೆ ಹೆಚ್ಚುತ್ತಿದ್ದು, ದೇಶದ ಪ್ರಮುಖ ನಗರಗಳಲ್ಲಿ ಆತಂಕದ ವಾತಾವರಣ ಮೂಡಿದೆ. ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ, ರೈಲ್ವೆ ನಿಲ್ದಾಣ, ಬಸ್, ಪ್ರವಾಸಿ ತಾಣಗಳು ಸೇರಿದಂತೆ ಎಲ್ಲೆಡೆಯೂ ಉಗ್ರರ ಕರಿನೆರಳು ಬಿದ್ದಿದೆ. ಇದೀಗ ಪ್ರಮುಖ ಪ್ರವಾಸಿ ತಾಣವಾಗಿರುವ ಗೋವಾ ಕೂಡ ಸೇರ್ಪಡೆಯಾಗಿದೆ. |