ಮುಂಬೈ ದಾಳಿ ಬಳಿಕ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರಿಗೆ ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೆಸರಿನಲ್ಲಿ ಬೆದರಿಕೆಯ ಕರೆ ಮಾಡಿರುವ ಮಾಧ್ಯಮಗಳ ವರದಿಯನ್ನು ಸಾರಸಗಟಾಗಿ ತಳ್ಳಿಹಾಕಿರುವ ಮುಖರ್ಜಿ, ಇದು ಪಾಕಿಸ್ತಾನದ ತಂತ್ರಗಾರಿಕೆಯಾಗಿದೆ ಎಂದು ಅವರು ಭಾನುವಾರ ಹೇಳಿದ್ದಾರೆ.
ಭಾರತದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಉಗ್ರರ ಕೈವಾಡ ಸ್ಪಷ್ಟವಾಗುತ್ತಿರುವುದನ್ನು ಮನಗಂಡ ಪಾಕ್, ಗಮನವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಇಂತಹ ಬೆದರಿಕೆಯ ಹುಸಿ ಕರೆಗಳ ಪ್ರಕರಣಗಳನ್ನು ಸೃಷ್ಟಿಸುತ್ತಿರುವುದಾಗಿ ಪ್ರಣಬ್ ಗಂಭೀರವಾಗಿ ಆರೋಪಿಸಿದ್ದಾರೆ.
ತಾನು ಮೇ ತಿಂಗಳಿನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜರ್ದಾರಿ ಅವರೊಂದಿಗೆ ಮಾತನಾಡಿದ್ದೆ ಅಷ್ಟೇ, ಆದರೆ ಮುಂಬೈ ಭಯೋತ್ಪಾದನಾ ದಾಳಿ ಬಳಿಕ ನನ್ನ(ಮುಖರ್ಜಿ)ಹೆಸರಲ್ಲಿ ಬೆದರಿಕೆ ಕರೆ ಮಾಡಲಾಗಿತ್ತು ಎಂಬ ವರದಿ ಹಾದಿ ತಪ್ಪಿಸುವ ತಂತ್ರವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದ ವಿದೇಶಾಂಗ ಸಚಿವರ ಹೆಸರಿನಲ್ಲಿ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಗೆ ನವೆಂಬರ್ 28ರಂದು ಬೆದರಿಸುವ ರೀತಿಯಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿದ ಹಿನ್ನೆಲೆಯಲ್ಲಿ, ಅಣ್ವಸ್ತ್ರ-ಶಕ್ತ ರಾಷ್ಟ್ರ ಪಾಕಿಸ್ತಾನದ ಆದ್ಯಂತವಾಗಿ ಕಟ್ಟೆಚ್ಚರ ಘೋಷಿಸಲಾಗಿತ್ತು ಮತ್ತು ಸೇನಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿತ್ತು ಎಂದು 'ಡಾನ್' ಪತ್ರಿಕೆ ಶನಿವಾರ ವರದಿ ಮಾಡಿತ್ತು.
ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಎಂದು ಕರೆದುಕೊಂಡ ವ್ಯಕ್ತಿಯು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಅವರಿಗೂ ಕರೆ ಮಾಡಲು ಪ್ರಯತ್ನಿಸಿದ್ದ. ಆದರೆ ಆಕೆಯ ಭದ್ರತೆಯಿಂದಾಗಿ ಇದು ಸಾಧ್ಯವಾಗಿರಲಿಲ್ಲ ಎಂದು ಡಾನ್ ವರದಿ ತಿಳಿಸಿತ್ತು. |