ಮುಂಬಯಿ ದಾಳಿ ಪ್ರಕರಣದಲ್ಲಿ ಸೆರೆ ಸಿಕ್ಕಿರುವ ಏಕೈಕ ಭಯೋತ್ಪಾದಕ ಅಜ್ಮಲ್ ಅಮೀರ್ ಕಸವ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದವನಾಗಿದ್ದು, ಆತನ ಹೆತ್ತವರ ಹೆಸರು ಅಲ್ಲಿನ ಮತದಾರರ ಪಟ್ಟಿಯಲ್ಲಿದೆ ಮತ್ತು ಈ 'ಹುಡುಗ'ನ ಬಗ್ಗೆ ಫರೀದ್‌ಕೋಟ್ ಪ್ರದೇಶದ ಜನತೆಗೆ ಗೊತ್ತಿದೆ ಎಂದು ಬ್ರಿಟಿಷ್ ಪತ್ರಿಕೆಯೊಂದು ತನಿಖಾ ವರದಿ ಪ್ರಕಟಿಸಿದ್ದು, ಮುಂಬಯಿ ದಾಳಿಯಲ್ಲಿ ಪಾಕಿಸ್ತಾನದ ಕೈವಾಡಕ್ಕೆ ಬಲವಾದ ಸಾಕ್ಷ್ಯಾಧಾರ ಲಭಿಸಿದಂತಾಗಿದೆ.
ತಾನು ಫರೀದ್‌ಕೋಟ್ ಪ್ರದೇಶದವನಾಗಿದ್ದು, ತಂದೆ ಮೊಹಮ್ಮದ್ ಆಮಿರ್ ಮತ್ತು ತಾಯಿ ನೂರ್ ಎಂದು ಅಜ್ಮಲ್ ಕಸವ್ ತನಿಖೆಯ ಸಂದರ್ಭದಲ್ಲಿ ಬಾಯಿಬಿಟ್ಟಿದ್ದನೆನ್ನಲಾಗಿದೆ. ಲಂಡನ್‌ನ 'ಅಬ್ಸರ್ವರ್' ಪತ್ರಿಕೆ ಈ ಕುರಿತು ತನಿಖೆ ನಡೆಸಿದ್ದು, ಈತನ ಹೇಳಿಕೆಯನ್ನು ಪುಷ್ಟೀಕರಿಸಿದೆ.
ಫರೀದ್‌ಕೋಟ್‌ನಲ್ಲಿ 478 ನೋಂದಾಯಿತ ಮತದಾರರಿದ್ದು, ಅದರಲ್ಲಿ ಮೊಹಮದ್ ಆಮಿರ್ ಮತ್ತು ನೂರ್ ಇಲಾಹಿ ಹೆಸರುಗಳಿವೆ. ಆಮಿರ್ ಮತ್ತು ನೂರ್‌ರ ರಾಷ್ಟ್ರೀಯ ಗುರುತು ಪತ್ರದ ಸಂಖ್ಯೆಯೂ ಲಭ್ಯವಾಗಿದೆ. ಪಟ್ಟಿಯಲ್ಲಿರುವ ವಿಳಾಸವನ್ನು ಅರಸಿ ಹೋದಾಗ, ಅಲ್ಲಿದ್ದ ಸುಲ್ತಾನ್ ಹೆಸರಿನ ವ್ಯಕ್ತಿಯೊಬ್ಬರು, ತಾನು ಮೊಹಮದ್ ಅಮೀರ್‌ನ ಮಾವ ಎಂದು ಹೇಳಿಕೊಂಡಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಈ ಹಳ್ಳಿಯು ನಿಷೇಧಿತ ಲಷ್ಕರ್ ಇ ತೋಯ್ಬಾ ಸಂಘಟನೆಯ ಸಕ್ರಿಯ ನೇಮಕಾತಿ ತಾಣವಾಗಿದೆ ಎಂದು ಗ್ರಾಮಸ್ಥನೊಬ್ಬ ಹೆಸರು ಬಹಿರಂಗಪಡಿಸದ ಷರತ್ತಿನೊಂದಿಗೆ ಹೇಳಿದ್ದಾನೆ. 'ಆ ಹುಡುಗನ ಬಗ್ಗೆ ನಮಗೆ ಗೊತ್ತಿದೆ. ದಾಳಿಯ ಮೊದಲ ರಾತ್ರಿಯೇ ನಮಗೆ ಇದು ಗೊತ್ತಿತ್ತು. ಅವರು ನಮ್ಮ ಯುವಕರನ್ನು ಜಿಹಾದ್‌ಗಾಗಿ ಬ್ರೈನ್ ವಾಶ್ ಮಾಡಿ ಕರೆದುಕೊಂಡು ಹೋಗುತ್ತಾರೆ. ಇಂಥವರೂ ಇಲ್ಲಿದ್ದಾರೆ. ಇದು ತಪ್ಪು' ಎಂಗು ಗ್ರಾಮಸ್ಥ ಹೇಳುತ್ತಾರೆ.
ನಾಲ್ಕು ವರ್ಷಗಳಿಂದ ಅಜ್ಮಲ್ ಊರಲ್ಲಿರಲಿಲ್ಲವಾದರೂ, ವರ್ಷಕ್ಕೊಮ್ಮೆ ಬಂದು ಮನೆಯವರನ್ನು ನೋಡಿಕೊಂಡು ಹೋಗುತ್ತಿದ್ದ. ಕಾಶ್ಮೀರವನ್ನು ಭಾರತದ ಆಡಳಿತದಿಂದ ಮುಕ್ತಗೊಳಿಸುವ ಬಗ್ಗೆಯೇ ಮಾತನಾಡುತ್ತಿದ್ದ ಎಂದು ಸ್ಥಳೀಯರು ಹೇಳುತ್ತಿದ್ದುದಾಗಿ ಅಬ್ಸರ್ವರ್ ವರದಿ ಮಾಡಿದೆ.
ಕಸವ್ ತನಿಖೆಯ ಸಂದರ್ಭ ತಾನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫರೀದ್‌ಕೋಟ್‌ನವ ಎಂದು ಹೇಳಿದ್ದ. ಅಬ್ಸರ್ವರ್ ವರದಿಗಾರ ಈ ಸ್ಥಳ ಹುಡುಕಲು ಹೊರಟಾಗ, ಅದೇ ಹೆಸರಿನ ನಾಲ್ಕು ಊರುಗಳು ಇದ್ದುದು ಗೊತ್ತಾಯಿತು. ಕೊನೆಗೂ ಅಜ್ಮಲ್ ಊರನ್ನು (ಒಕಾರ ಜಿಲ್ಲೆಯ ದೇಪಲ್‌ಪುರ ಬಳಿಯ) ಪತ್ತೆ ಹಚ್ಚುವಲ್ಲಿ ಅಬ್ಸರ್ವರ್ ವರದಿಗಾರ ಸಫಲರಾಗಿದ್ದಾರೆ.
ಇದೀಗ ಅಜ್ಮಲ್‌ನ ಹೆತ್ತವರನ್ನು ನಿಗೂಢ ತಾಣಕ್ಕೆ ರವಾನಿಸಲಾಗಿದೆ. ಅವರೀಗ ಊರಲ್ಲಿಲ್ಲ. |