ಮುಂಬೈ ಉಗ್ರರು ನಡೆಸಿರುವ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ತನಿಖಾ ಆಯೋಗವನ್ನು ನೇಮಿಸಬೇಕೆಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರಿಸುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಮುಂಬೈ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ.
ಸರ್ಕಾರಗಳು ಎರಡು ವಾರಗಳೊಳಗಾಗಿ ಉತ್ತರಿಸಬೇಕು ಎಂದು ನ್ಯಾಯಮೂರ್ತಿಗಳಾದ ಸ್ವತಂತ್ರ ಕುಮಾರ್ ಮತ್ತು ಬೊಬಾಡೆ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರತಿವಾದಿಗಳಿಗೆ ಸೂಚಿಸಿದ್ದು, ಡಿ.18ರಂದು ಪ್ರಕರಣವನ್ನು ಮತ್ತೆ ವಿಚಾರಣೆಗೆ ಎತ್ತಿಕೊಳ್ಳಲಿದೆ. 1993ರಲ್ಲಿ ಮುಂಬೈನಲ್ಲಿ ಸಂಭವಿಸಿದ ಗಲಭೆಗೆ ಶ್ರೀಕೃಷ್ಣ ಆಯೋಗ ನೇಮಿಸಿದ ರೀತಿಯಲ್ಲೇ ಆಯೋಗವೊಂದನ್ನು ನೇಮಿಸಬೇಕೆಂದು ಅರ್ಜಿದಾರ ವಿಪಿ ಪಾಟೀಲ್ ಕೋರಿದ್ದಾರೆ.
ಅಮೆರಿಕದಲ್ಲಿ ಸೆಪ್ಟೆಂಬರ್ 11ರ ಭಯೋತ್ಪಾದನೆ ಘಟನೆ ಬಳಿಕ ಸರ್ಕಾರ 9/11 ಆಯೋಗವನ್ನು ರಚಿಸಿ, ಅದು 3 ತಿಂಗಳಲ್ಲೇ ತನ್ನ ವರದಿಯನ್ನು ಸಲ್ಲಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಮೇಲೆ ಕ್ರಮ ಕೈಗೊಳ್ಳಲಾಗಿತ್ತು ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. |