ಬೆಂಕಿ ಚೆಂಡು ನಾಯಕಿಯೆಂದೇ ಪರಿಗಣಿಸಲ್ಪಟ್ಟಿದ್ದ, ಬಿಜೆಪಿಯಿಂದ ಸಿಡಿದು ತನ್ನದೇ ಭಾರತೀಯ ಜನ ಶಕ್ತಿ ಪಕ್ಷ ಕಟ್ಟಿದ್ದ ಉಮಾ ಭಾರತಿ ಅವರ ಪಕ್ಷವು ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಖಾತೆ ತೆರೆದರೂ, ಪಕ್ಷದ ನಾಯಕಿ ಸ್ವತಃ ಸೋತಿದ್ದಾರೆ. ಈ ಮೂಲಕ ರಾಜಕೀಯ ಸನ್ಯಾಸ ಮಾಡುವತ್ತ ಹೆಜ್ಜೆ ಇರಿಸಿದ್ದಾರೆ.ಟಿಕಾಮ್‌ಗಢ ಕ್ಷೇತ್ರದಲ್ಲಿ ಸುಮಾರು 9,828 ಮತಗಳ ಅಂತರದಿಂದ ಕಾಂಗ್ರೆಸ್‌ನ ಯಾದವೇಂದ್ರ ಸಿಂಗ್ ಬುಂದೇಲಾ ಎದುರು ಸೋಲು ಕಂಡಿರುವ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ, ವಿಜಯವು ತನ್ನ ಗುರಿಯಲ್ಲ, ಬಿಜೆಪಿಯನ್ನು ಸೋಲಿಸುವುದೇ ತನ್ನ ಏಕೈಕ ಗುರಿಯಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.ನವೆಂಬರ್ 27ರಂದು ನಡೆದ ಚುನಾವಣೆಯ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯು ಅಧಿಕಾರ ಉಳಿಸಿಕೊಂಡಿದೆ. 213 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅದರ ಮುಖ್ಯಸ್ಥೆ ಸೋತರೂ, ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಮಧ್ಯಪ್ರದೇಶದಲ್ಲಿ ಭಾರತೀಯ ಜನ ಶಕ್ತಿ ಪಕ್ಷ (ಬಿಜೆಎಸ್) ತನ್ನ ಖಾತೆ ತೆರೆದಿದೆ.ಎರಡು ದಿನಗಳ ಹಿಂದಷ್ಟೇ ಟಿಕಾಮ್‌ಗಢದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಉಮಾ, ತನ್ನ ಉದ್ದೇಶ ಈಡೇರುವಲ್ಲಿ ವಿಫಲವಾದರೆ ರಾಜಕೀಯ ಸನ್ಯಾಸ ಮಾಡಿ, ಕೇದಾರನಾಥಕ್ಕೆ ತೆರಳುವುದಾಗಿ ಹೇಳಿದ್ದರು. ಮಧ್ಯಪ್ರದೇಶದಲ್ಲಿ ಬಿಜೆಪಿ ವಿಜಯಿಯಾದರೆ ರಾಜಕೀಯವನ್ನೇ ತ್ಯಜಿಸುವುದಾಗಿಯೂ ಅವರು ಹೇಳಿದ್ದರು.ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಘಟಕದ ಅಧ್ಯಕ್ಷರೊಬ್ಬರಿಗೆ ಬಹಿರಂಗವಾಗಿ ಕಪಾಳ ಮೋಕ್ಷ ಮಾಡಿದ್ದಲ್ಲದೆ, ಆ ಬಳಿಕ ಪ್ರೀತಿಯಿಂದ ಹೊಡೆದೆ ಎಂದು ತಪ್ಪಿಸಿಕೊಂಡು ವಿವಾದಕ್ಕೆ ಸಿಲುಕಿದ್ದರು. ಮಾತ್ರವಲ್ಲ, ಬಿಜೆಪಿಯ ಪ್ರಧಾನಿ ಪದವಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ತಾಕತ್ತಿದ್ದರೆ ತನ್ನೆದುರು ಚುನಾವಣೆಗೆ ಸ್ಪರ್ಧಿಸಲಿ ಎಂಬ ಸವಾಲನ್ನೂ ಹಾಕಿ ಗಮನ ಸೆಳೆದಿದ್ದರು.ಎರಡೂವರೆ ವರ್ಷಗಳ ಹಿಂದೆ ಕಟ್ಟಲಾಗಿದ್ದ ಬಿಜೆಎಸ್ ಪಕ್ಷವು 230 ಕ್ಷೇತ್ರಗಳ ವಿಧಾನಸಭೆಗೆ 213 ಕಡೆಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು ಮತ್ತು ಬಿಜೆಪಿ ಕೂಡ ಉಮಾಭಾರತಿಯ ಪಕ್ಷವು ಹಾನಿಯುಂಟು ಮಾಡುತ್ತದೆ ಎಂದೇ ಆತಂಕದಲ್ಲಿತ್ತು. |