ಕಿಲಿರೂರು ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆಂಬ ಆಪಾದನೆಯ ಹಿನ್ನೆಲೆಯಲ್ಲಿ, ಕೇರಳ ಆರೋಗ್ಯ ಸಚಿವೆ ಪಿ.ಕೆ.ಶ್ರೀಮತಿ ಮತ್ತು ಇತರ ಐವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಕೇರಳದ ವಿಚಾರಣಾ ನ್ಯಾಯಾಲಯ ಒಂದು ಬುಧವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.
ಪಿ.ನಾಗರಾಜನ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳುವ ವೇಳೆಗೆ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜೆಸ್ಟ್ರೀಟ್ ಪಿಲಿಪ್ ಥೋಮಸ್ ಈ ಆದೇಶವನ್ನು ನೀಡಿದ್ದಾರೆ.
ಸಚಿವೆ ಶ್ರೀಮತಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಎನ್.ಬಾಲಗೋಪಾಲ್ ಮತ್ತು ಆಪ್ತ ಕಾರ್ಯದರ್ಶಿ ಎಸ್.ರಾಜೇಂದ್ರನ್ ಅವರುಗಳು ಸಂಚು ಹೂಡಿ ಕಡತವನ್ನು ನಾಶಮಾಡಿದ್ದಾರೆ ಎಂದು ದೂರಲಾಗಿದೆ. ಲೈಂಗಿಕ ಪೀಡನೆಗೊಳಗಾಗಿ 2005ರಲ್ಲಿ ಸಾವಿಗೀಡಾಗಿದ್ದಾಳೆ ಎಂದು ಹೇಳಲಾಗಿರುವ 18ರ ಹರೆಯದ ಯವತಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಐಜಿ ರ‌್ಯಾಂಕಿನ ಸಿಬಿಐ ಅಧಿಕಾರಿಯೊಬ್ಬರು ತನಿಖೆಗೆ ಆದೇಶ ನೀಡಿರುವ ಕಡತವನ್ನು ನಾಪತ್ತೆ ಮಾಡಲು ಈ ಮೇಲಿನವರ ಕೈವಾಡ ಇದೆ ಎಂದು ಆರೋಪಿಸಲಾಗಿದೆ.
ಕೋಟ್ಟಾಯಂನ ಕಿಲಿಯೂರು ಎಂಬಲ್ಲಿನ ಈ ಹುಡುಗಿಯನ್ನು ದೂರದರ್ಶನ ಧಾರಾವಾಹಿಗಳಲ್ಲಿ ಅವಕಾಶ ನೀಡುವ ಆಮಿಷಒಡ್ಡಿ ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಆಪಾದಿಸಲಾಗಿದೆ.
ಕೆಲವು ಪ್ರಭಾವಿ ವ್ಯಕ್ತಿಗಳು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿರುವ ಹುಡುಗಿಯ ತಂದೆ ಈ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. |