ಮಹಾಮಾರಿ ಹಕ್ಕಿಜ್ವರವು ಈಶಾನ್ಯರಾಜ್ಯ ಅಸ್ಸಾಮಿನ ಹೊಸಪ್ರದೇಶಗಳಿಗೆ ವ್ಯಾಪಿಸಿದ್ದು, ಕಳೆದೆರಡು ವಾರಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಪಕ್ಷಿಗಳನ್ನು ವಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಹಕ್ಕಿಜ್ವರ ಹಬ್ಬುವ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದೆರಡು ವಾರಗಳಿಂದ ಸುಮಾರು ಎರಡು ಲಕ್ಷ ಪಕ್ಷಿಗಳನ್ನು ವಧಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ ಪಾರ್ಥಜೋತಿ ಗೊಗೋಯ್ ಹೇಳಿದ್ದಾರೆ.
ಈ ಮಾರಣಾಂತಿಕ ವೈರಸ್ ಹೊಸಪ್ರದೇಶಗಳಲ್ಲಿ ಹರಡುತ್ತಿರುವುದು ಕಳವಳದ ವಿಚಾರವಾಗಿದ್ದು, ಗರಿಷ್ಠ ಆರೋಗ್ಯ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಹೇಳಿರುವ ಅವರು, ವೈದ್ಯರು ಮತ್ತು ಅರೆವೈದ್ಯಕೀಯ ತಂಡಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಕಾರಣ ಇದು ಮನುಷ್ಯರ ಮೇಲೆ ಪರಿಣಾಮ ಬೀರಿಲ್ಲ ಎಂದು ನುಡಿದರು.
ಅಸ್ಸಾಮಿನ 27 ಜಿಲ್ಲೆಗಳಲ್ಲಿ ಇದುವರೆಗೆ ಆರು ಜಿಲ್ಲೆಗಳಲ್ಲಿ ಹಕ್ಕಿಜ್ವರ ಸೋಂಕು ಕಾಣಿಸಿಕೊಂಡಿದೆ. ಇನ್ನೂ ಸುಮಾರು ಒಂದೂವರೆ ಲಕ್ಷ ಕೋಳಿಗಳನ್ನು ವಧಿಸಲು ಆದೇಶಿಸಲಾಗಿದೆ ಎಂದು ಪಶುವೈದ್ಯಕೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಮರೂಪ(ಮೆಟ್ರೋ), ಕಾಮರೂಪ(ಗ್ರಾಮಾಂತರ), ದಿಬ್ರೂಗಡ, ನಲ್ಬಾರಿ, ಬಾರ್ಪೆಟ ಮತ್ತು ಚಿರಾಗ್ ಜಿಲ್ಲೆಗಳಲ್ಲಿ ಹಕ್ಕಿಜ್ವರ ಹಬ್ಬುತ್ತಿದ್ದು, ಈ ಜಿಲ್ಲೆಗಳ 200 ಗ್ರಾಮಗಳಲ್ಲಿ ವಧಾಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
|