ಮುಂಬೈಯಲ್ಲಿ ವಿಧ್ವಂಸಕಾರಿ ಘಟನೆಗಳನ್ನು ನಡೆಸಿರುವ ಭಯೋತ್ಪಾದನಾ ಕೃತ್ಯಕ್ಕಾಗಿ ಪಾಕಿಸ್ತಾನ ಪ್ರಾಂತ್ಯವನ್ನು ಬಳಸಿಕೊಂಡಿರುವ ಕುರಿತು ಸ್ಪಷ್ಟ ಪುರಾವೆ ಇದೆ ಎಂದು ಗೃಹ ಸಚಿವ ಪಿ.ಚಿದಂಬರಂ ಗುರುವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಕರೆಯಲಾಗಿರುವ ಅಲ್ಪಾವಧಿಯ ಅವಧಿವೇಶನದಲ್ಲಿ, ಗೃಹಖಾತೆ ವಹಿಸಿಕೊಂಡಿರುವ ಬಳಿಕ ಪ್ರಥಮ ಬಾರಿಗೆ ಲೋಕಸಭೆಯಲ್ಲಿ ಚಿದಂಬರಂ ಮಾತನಾಡುತ್ತಿದ್ದರು.
ದಾಳಿಯಲ್ಲಿ ಮೃತರಾದವರಿಗೆ ಮತ್ತು ಉಗ್ರರ ವಿರುದ್ಧ ಕಾದಾಟದ ವೇಳೆ ಪ್ರಾಣತೆತ್ತ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಚಿದಂಬರಂ, ಭಯೋತ್ಪಾದನಾ ಕೃತ್ಯಗಳನ್ನು ಹತ್ತಿಕ್ಕಲು ಕೇಂದ್ರೀಯ ತನಿಖಾ ದಳದ ಸ್ಥಾಪನೆಯ ಪ್ರಸ್ತಾಪವನ್ನು ಸದನದ ಮುಂದಿರಿಸಿದರು.
ದಾಳಿಯ ಕುರಿತು ತನಿಖಾತಜ್ಞರು ಘಟನೆಗಳ ಮರುಜೋಡಿಸುತ್ತಿದ್ದಾರೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
ರಾಷ್ಟ್ರಕ್ಕೆ ತನಿಖಾದಳ ಅಗತ್ಯವಿದೆ ಎಂದು ನುಡಿದ ಅವರು ರಾಷ್ಟ್ರಾದ್ಯಂತ 20 ಭಯೋತ್ಪಾದನಾ ವಿರೋಧಿ ಸಂಸ್ಥೆಗಳನ್ನು ಸ್ಥಾಪಿಸುವುದಾಗಿಯೂ ಲೋಕಸಭೆಗೆ ತಿಳಿಸಿದರು.
ಕರಾವಳಿಗಳ ಸುರಕ್ಷತೆಗಾಗಿ ಕೋಸ್ಟಲ್ ಕಮಾಂಡ್ ಅನ್ನು ಹುಟ್ಟುಹಾಕುವುದಾಗಿಯೂ ಅವರು ನುಡಿದರು. ಅಲ್ಲದೆ, ಪ್ರಮುಖ ನಗರಗಳಲ್ಲಿ ಎನ್ಎಸ್‌ಜಿ ಹಬ್‌ಗಳನ್ನು ಸ್ಥಾಪಿಸುವ ಯೋಜನೆಯನ್ನೂ ಅವರು ಪ್ರಸ್ತುತ ಪಡಿಸಿದರು. |