ಮುಂಬೈಯಲ್ಲಿ ಭಯೋತ್ಪಾದನಾ ದಾಳಿ ನಡೆಸಿದ ದುರುಳರಲ್ಲಿ ಸೆರೆಸಿಕ್ಕಿರುವ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಇಮಾಮ್ ಅಲಿಯಾಸ್ ಕಸಬ್‌ನನ್ನು ಡಿಸೆಂಬರ್ 24ರ ತನಕ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಯೋತ್ಪಾದನಾ ಬೆದರಿಕೆಗಳ ಹಿನ್ನೆಲೆಯಲ್ಲಿ, ಕಸಬ್‌ನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಿಕೆಯ ಯೋಜನೆಯನ್ನು ಮುಂಬೈ ಪೊಲೀಸರು ಮುಂದೂಡಿದ್ದಾರೆ. ಬದಲಿಗೆ ಕ್ರೈಂ ಬ್ರಾಂಚಿನಲ್ಲೇ ಪ್ರಕರಣವನ್ನು ವಿಚಾರಿಸುವಂತೆ ಮನವಿಯೊಂದನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಆತನನ್ನು ಭದ್ರತಾ ಕಾರಣಗಳಿಗಾಗಿ ನ್ಯಾಯಾಲಯಕ್ಕೆ ಕರೆದೊಯ್ಯುವಂತಿಲ್ಲ, ಹಾಗಾಗಿ ಆತನ್ನು ಕ್ರೈಂ ಬ್ರಾಂಚ್ ಕಚೇರಿಯಲ್ಲೇ ವಿಚಾರಿಸಲು ಅನುಮತಿ ಕೋರುವುದಾಗಿ ಪೊಲೀಸ್ ಜಂಟಿ ಆಯುಕ್ತ(ಅಪರಾಧ) ರಾಕೇಶ್ ಮಾರಿಯಾ ಹೇಳಿದ್ದಾರೆ.
ಭಯೋತ್ಪಾದನಾ ದಾಳಿಯ ಬಳಿಕ ನವೆಂಬರ್ 27ರಿಂದ ಅಜ್ಮಲ್ ಪೊಲೀಸರ ವಶದಲ್ಲಿದ್ದಾನೆ. ಈತನನ್ನು ಇನ್ನಷ್ಟೆ ಬಂಧಿಸಬೇಕಾಗಿದ್ದು, ಅತ್ಯಂತ ಗೌಪ್ಯ ಸ್ಥಳದಲ್ಲಿ ಇರಿಸಲಾಗಿದೆ.
ನವೆಂಬರ್ 26ರ ವಿಧ್ವಂಸಕಾರಿ ಕೃತ್ಯಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ 12 ಪ್ರಕರಣಗಳನ್ನು ಹೇರಲಾಗಿದೆ. ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ವಶಕ್ಕೊಪ್ಪಿಸುವಂತೆ ಕೋರಿದ್ದಾರೆ.
ಅಜ್ಮಲ್ ವಿರುದ್ಧ, ಕೊಲೆ, ಕೊಲೆ ಯತ್ನ, ರಾಷ್ಟ್ರದ ವಿರುದ್ಧ ಯುದ್ಧ ಸಾರುವ ಸಂಚು ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ರಾಕೇಶ್ ಮಾರಿಯಾ ಬುಧವಾರ ಹೇಳಿದ್ದಾರೆ.
|