ನವದೆಹಲಿ: ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ನಾವು ಒಂದಾಗಿದ್ದೇವೆ ಎಂಬ ಬಲವಾದ ಸಂದೇಶವನ್ನು ಜಗತ್ತಿಗೆ ಸಾರಬೇಕಾಗಿದೆ ಎಂದು ವಿಪಕ್ಷ ನಾಯಕ ಲಾಲ್ ಕೃಷ್ಣ ಆಡ್ವಾಣಿ ಅವರು ಸರ್ಕಾರಕ್ಕೆ ಸಹಕಾರವನ್ನು ವ್ಯಕ್ತಪಡಿಸುತ್ತಾ ನುಡಿದರು. ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ನಾವು ಕಡೆ ತನಕ ಹೋರಾಡುತ್ತೇವೆ ಎಂದು ಆಡ್ವಾಣಿ ಗುರುವಾರ ಲೋಕಸಭೆಯಲ್ಲಿ ಭರವಸೆ ನೀಡಿದರು.
ಭಯೋತ್ಪಾದನೆಯ ವಿರುದ್ಧ ಹೋರಾಟದಲ್ಲಿ ಎನ್‌ಡಿಎಯು ಸರ್ಕಾರದ ಪ್ರತಿ ನಿರ್ಧಾರವನ್ನು ಬೆಂಬಲಿಸಲಿದೆ ಎಂದು ಅವರು ಸರಕಾರಕ್ಕೆ ನುಡಿದರು. ಅಲ್ಲದೆ, ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು.
ಮುಂಬೈ ದಾಳಿಯ ಕುರಿತಂತೆ ದಾಳಿಕೋರರು ರಾಷ್ಟ್ರ ರಹಿತರು ಎಂಬ ಪಾಕಿಸ್ತಾನಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರ ನಿರ್ದಯ ಹೇಳಿಕೆಯನ್ನು ಉದ್ಧರಿಸಿದ ಅವರು, ಸಾಕಷ್ಟು ಅಧ್ಯಯನ ಮತ್ತು ತರಬೇತಿಯ ಮೂಲಕ ಇನ್ನಷ್ಟು ದೊಡ್ಡ ಮಟ್ಟಿನ ಸಂಚು ಹೂಡುವ ಭಾಗವಿದಾಗಿದೆ ಎಂದು ಆಡ್ವಾಣಿ ನುಡಿದರು.
ಪಾಕಿಸ್ತಾನದ ಕಾರ್ಯವೈಖರಿಯನ್ನು ಟೀಕಿಸಿದ ಆಡ್ವಾಣಿ, ಅಧ್ಯಕ್ಷರೋ, ಪ್ರಧಾನಿಯೋ ಇಲ್ಲ ಸೇನೇಯೋ? ಪಾಕಿಸ್ತನದಲ್ಲಿ ಅಂತಿಮ ಪ್ರಾಧಿಕಾರ ಯಾವುದು ಎಂದೇ ಯಾರಿಗೂ ಗೊತ್ತಾಗುತ್ತಿಲ್ಲ ಎಂದು ನುಡಿದರು.
ಲಷ್ಕರೆ ಮುಖ್ಯಸ್ಥ ಹಾಗೂ ಇತರ ಉಗ್ರರರನ್ನು ಗೃಹ ಬಂಧನ ಎಂಬುದು ಒಂದು ಗಿಮ್ಮಿಕ್ ಎಂದು ವಿಪಕ್ಷ ನಾಯಕ ನುಡಿದರು. ವಿಶ್ವಸಂಸ್ಥೆಗೆ ದೂರಿಕೊಳ್ಳುವ ಬದಲು ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರಬೇಕು ಎಂದು ಆಡ್ವಾಣಿ ಈ ಸಂದರ್ಭದಲ್ಲಿ ಅಭಿಪ್ರಾಯಿಸಿದರು.
ಭಯೋತ್ಪಾದನೆಗೂ ಇಸ್ಲಾಂಗೂ ಸಂಬಂಧವಿಲ್ಲ ಎಂದು ನುಡಿದ ಆಡ್ವಾಣಿ, ಲಷ್ಕರೆ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಬಿಡುಗಡೆ ಮಾಡಿರುವ ಕರಪತ್ರವನ್ನು ಉಲ್ಲೇಖಿಸಿದರು. "ಭಾರತದ ಎಲ್ಲೆಡೆಯಲ್ಲಿ ಇಸ್ಲಾಮಿಕ್ ಆಡಳಿತವನ್ನು ಪುನಸ್ಥಾಪಿಸುವುದು ಜಿಹಾದ್‌ನಲ್ಲಿ ಸೇರಿದೆ" ಎಂದು ಕರಪತ್ರದಲ್ಲಿ ಹೇಳಿರುವುದನ್ನು ಪ್ರಸ್ತಾಪಿಸಿದ ಆಡ್ವಾಣಿ, ಇಸ್ಲಾಮನ್ನು ರಾಜಕೀಯಗೊಳಿಸುವುದರ ವಿರುದ್ಧ ಭಾರತೀಯ ಮುಸ್ಲಿಮರು ಜಾಗೃತರಾಗಬೇಕು ಎಂದು ಕರೆ ನೀಡಿದರು. ಕಾಶ್ಮೀರ ವಿಚಾರದಲ್ಲಿ ಭಾರತವು ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ನುಡಿದಿರುವ ಅವರು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದರು.
ಉಗ್ರರರ ದಾಳಿಗೆ ಸಿಲುಕಿ ಸಾವನ್ನಪ್ಪಿದವರಿಗೆ ಮತ್ತು ಉಗ್ರರ ವಿರುದ್ಧ ಹೋರಾಡುವಾಗ ಪ್ರಾಣಕಳೆದುಕೊಂಡ ಹೇಮಂತ್ ಕರ್ಕರೆ, ಸಂದೀಪ್ ಉನ್ನಿಕೃಷ್ಣನ್ ಮತ್ತಿತರರ ಸಾವಿಗೆ ಅವರು ಸಂತಾಪ ವ್ಯಕ್ತಪಡಿಸಿದರು.
"ನಮ್ಮಿಂದ ಅಸಾಧ್ಯವಾದುದು ಏನೂ ಇಲ್ಲ" ಎಂಬುದಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಎನ್ಎಸ್‌ಜಿ ಕಮಾಂಡೋ ಒಬ್ಬರ ಮಾತನ್ನು ನೆನಪಿಸಿದ ಅವರು ಉಗ್ರವಾದದ ವಿರುದ್ಧ ಹೋರಾಡಲು ಇಂತಹ ಸ್ಫೂರ್ತಿಯ ಅಗತ್ಯವಿದೆ ಎಂಬ ಮೆಚ್ಚುಗೆಯ ಮಾತನ್ನಾಡಿದರು. |