ಭಯೋತ್ಪಾದನೆ ಎಂಬ ಪಿಡುಗನ್ನು ತೊಡೆದು ಹಾಕಲು ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸುವುದು ಪರಿಹಾರವಲ್ಲ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಗುರುವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ಯುದ್ಧ ಹೇರುವುದು ಪರಿಹಾರವಲ್ಲ ಎಂಬುದನ್ನು ತಾನು ಸ್ಪಷ್ಟಪಡಿಸುತ್ತೇನೆ ಎಂದು ನುಡಿದ ಮುಖರ್ಜಿ, ಭಾರತವು ಅಂತಾರಾಷ್ಟ್ರೀಯವಾಗಿ ಉಗ್ರವಾದದ ವಿರುದ್ಧ ಚಳುವಳಿ ಹೂಡುತ್ತಿದೆ ಮತ್ತು ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತದೆ ಎಂದು ನುಡಿದರು.
ಲೋಕಸಭೆಯಲ್ಲಿ ಗುರುವಾರ ಭಯೋತ್ಪಾದನಾ ದಾಳಿ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಪಾಕಿಸ್ತಾನವು ತನ್ನ ನೆಲದಲ್ಲಿ ನೆಲೆಯೂರಿರುವ ಉಗ್ರವಾದಿ ಪಡೆಗಳ ವಿರುದ್ಧ ಕಾರ್ಯಾಚರಿಸಿ, ಭಾರತದ ವಿರುದ್ಧ ದಾಳಿ ನಡೆಸುವುದನ್ನು ನಿಲ್ಲಿಸಬೇಕು ಎಂದು ಸಚಿವರು ನುಡಿದರು.
"ಮುಂಬೈ ದಾಳಿಯ ನಿಯಂತ್ರಕರು ಪಾಕಿಸ್ತಾನದಲ್ಲಿದ್ದಾರೆ. ಇಸ್ಲಾಮಾಬಾದ್ ಅವರ ವಿರುದ್ಧ ಕಾರ್ಯಾಚರಿಸಬೇಕಾಗಿದೆ. ಉಗ್ರರ ವಿರುದ್ಧ ಕ್ರಮಕೈಗೊಳ್ಳಲು ಪಾಕಿಸ್ತಾನದ ಮೇಲೆ ಒತ್ತಡ ಹೇರಬೇಕು. ಮುಂಬೈದಾಳಿಯ ಮಾತ್ರವಲ್ಲದೆ ಹಲವು ದಾಳಿಗಳ ಕೇಂದ್ರವು ನಮ್ಮ ನೆರೆಯ ರಾಷ್ಟ್ರವಾಗಿದೆ" ಎಂದು ಮುಖರ್ಜಿ ನುಡಿದರು.
ಪಾಕಿಸ್ತಾನವು ಇಚ್ಚಾಪೂರಿತವಾಗಿ ಭಾರತಕ್ಕೆ ಬೇಕಿರುವ ಉಗ್ರರಿಗೆ ಆಶ್ರಯ ನೀಡುತ್ತಿದೆ, ಭಾರತವು ಪದೇಪದೇ ವಿನಂತಿಸುತ್ತಿದ್ದರೂ, ಭಾರತಕ್ಕೆ ಅತ್ಯಂತ ಬೇಕಾಗಿರುವ ದಾವೂದ್ ಇಬ್ರಾಹಿಂನನ್ನು ಹಸ್ತಾಂತರಿಸುವಲ್ಲಿ ವಿಫಲವಾಗಿದೆ ಎಂದು ಅವರು ದೂರಿದರು.
ಭಾರತ ಮಾತ್ರವಲ್ಲದೆ ವಿಶ್ವದ ಇತರ ಹಲವು ರಾಷ್ಟ್ರಗಳೂ ಉಗ್ರರ ದಾಳಿಯಿಂದ ನಲುಗಿದ್ದು, ಇದೊಂದು ಜಾಗತಿಕ ಸಮಸ್ಯೆಯಾಗಿದ್ದು ಇದನ್ನು ಜಾಗತಿಕವಾಗಿ ನಿಭಾಯಿಸುವ ಅಗತ್ಯವಿದೆ ಎಂದು ನುಡಿದರು.
|