ಮುಂಬೈ ದಾಳಿ ನಡೆಸಿರುವ ಉಗ್ರರಿಗೂ ರಾಷ್ಟ್ರಾದ್ಯಂತ ಹಲವಾರು ಸ್ಫೋಟಗಳನ್ನು ನಡೆಸಿರುವ ಇಂಡಿಯನ್ ಮುಜಾಹಿದೀನ್(ಐಎಂ) ಸಂಘಟನೆಗೂ ನಂಟು ಇದೆಯೇ ಎಂಬುದನ್ನು ಪತ್ತೆ ಮಾಡುವತ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೇಲ್ನೋಟಕ್ಕೆ ಇವರ ನಡುವಿನ ಸಂಪರ್ಕದ ಸಾಧ್ಯತೆ ಅತ್ಯಂತ ತೆಳುವಾಗಿದೆ. ಇಂಡಿಯನ್ ಮುಜಾಹಿದೀನ್ ಸದಸ್ಯರು ದೇಶದೊಳಗೆ ಬೆಳೆದಿರುವ ಬಾಂಬರ್‌ಗಳು. ಇವರ ಹೆಚ್ಚಿನ ಚಟುವಟಿಕೆ ಜೈಲಿನಲ್ಲಿ ನಡೆಯುತ್ತದೆ. ಆದರೆ, ಮುಂಬೈ ದಾಳಿ ನಡೆಸಿದ ದುರುಳರು ಪಾಕಿಸ್ತಾನದಿಂದ ಬಂದವರು.
ಲಷ್ಕರೆ ತೋಯ್ಬಾದಂತಹ ಸಂಘಟನೆಗಳ ಮೂಲಕ ಸಂಪರ್ಕ ಇದ್ದಿರುವ ಸಾಧ್ಯತೆಗಳನ್ನು ತನಿಖಾದಾರರು ತಳ್ಳಿಹಾಕುವುದಿಲ್ಲ. 26/11 ದಾಳಿಕೋರರು ಪಡೆದಿರುವಂತಹ ತರಬೇತಿಯನ್ನು ಇಂಡಿಯನ್ ಮುಜಾಹಿದೀನ್ ಸಹ ಪಡೆದಿದೆ ಎಂದು ಮುಂಬೈ ಪೊಲೀಸರು ಹೇಳುತ್ತಾರೆ. ಇಂಡಿಯನ್ ಮುಜಾಹಿದೀನ್ ಸ್ಥಾಪಕ ಹಾಗೂ ಭೂಗತ ಪಾತಕಿ ರಿಯಾಜ್ ಭಟ್ಕಳ್ ಮುಂಬೈದಾಳಿಯಲ್ಲಿ ಯಾವ ಪಾತ್ರವನ್ನು ವಹಿಸಿದ್ದಾನೆ ಎಂಬುದನ್ನು ಮುಂಬೈ ಪೊಲೀರು ತನಿಖೆ ನಡೆಸುತ್ತಿದ್ದಾರೆ.
1993ರಲ್ಲಿ ಮುಂಬೈ ದಾಳಿ ನಡೆಸಿದ ವೇಳೆ ಬಳಸಿರುವಂತ ಆಸ್ಟ್ರಿಯಾ ಕಂಪೆನಿಯಲ್ಲಿ ತಯಾರಾಗಿರುವ ಗ್ರೆನೇಡುಗಳನ್ನು 26/11ರಂದು ನಡೆಸಿರುವ ದಾಳಿಯಲ್ಲೂ ಬಳಸಲಾಗಿದೆ.
ಈ ಎರಡು ಸಂಘಟನೆಗಳಿಗೆ ಸಂಪರ್ಕವಿಲ್ಲದಿದ್ದರೂ, ಅವುಗಳ ಪಾಕಿಸ್ತಾನ ನಿಭಾವಕರು ಸಂಪರ್ಕ ಸಾಧಿಸುವಂತೆ ಮಾಡಿರಬಹುದು ಎಂಬ ಸಂಶಯವಿದೆ. ದೆಹಲಿ, ಜೈಪುರ, ಆಹಮದಾಬಾದ್ ಮತ್ತು ಸೂರತ್‌ಗಳಲ್ಲಿ ಬಾಂಬುಗಳನ್ನು ಇರಿಸಲು ಸ್ಥಳೀಯ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸ್ಥಳೀಯ ಸದಸ್ಯರನ್ನು ಬಳಸಿಕೊಳ್ಳಲಾಗಿದ್ದರೆ, ಮುಂಬೈಯಲ್ಲಿ ದಾಳಿ ನಡೆಸಲು ಪಾಕಿಸ್ತಾನದ ಫಿದಾಯಿನ್‌ಗಳನ್ನು ಬಳಸಿಕೊಳ್ಳಲಾಗಿದೆ.
|