ಭಾರತೀಯ ಬೇಹುಗಾರಿಕಾ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆಗೆ ಚುರುಕು ನೀಡಲು ಮುಂದಾಗಿರುವ ಸರ್ಕಾರ ಈ ಬಗ್ಗೆ ಅಮೆರಿಕದ ಸಹಾಯ ಪಡೆಯಲು ಮುಂದಾಗಿದೆ ಎನ್ನಲಾಗಿದೆ.
ಮುಂಬೈ ದಾಳಿಗೆ ಮುಂಚಿತವಾಗಿ ನೀಡಿರುವ ಎಚ್ಚರಿಕೆಗೆ ಸೂಕ್ತಕ್ರಮ ಕೈಗೊಳ್ಳಲು ವಿಫಲವಾಗಿರುವುದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗುಪ್ತಚರ ಮಾಹಿತಿಗಳ ಹಂಚುವಿಕೆ ಮತ್ತು ಕ್ರಮಗಳ ಕುರಿತು ಸೂಕ್ಷ್ಮ ಪರಿಶೀಲನೆಗಾಗಿ ಯಂತ್ರವೊಂದನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಗೃಹಸಚಿವಾಲಯ, ಕಾನೂನು ಸಚಿವಾಲಯ ಮತ್ತು ಗುಪ್ತಚರ ಇಲಾಖೆಗಳ ಅಧಿಕಾರಿಗಳು ಈ ಕುರಿತು ಒಂದು ವ್ಯವಸ್ಥೆಯ ಚೌಕಟ್ಟು ರೂಪಿಸಲು ಕಾರ್ಯಗತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಇದಕ್ಕಾಗಿ ಸರಕಾರಕ್ಕೆ ಅಮೆರಿಕದ ರಾಷ್ಟ್ರೀಯ ಗುಪ್ತಚರ ದಳದ ಮುಖ್ಯಸ್ಥ ಮೈಕ್ ಮ್ಯಾಕ್ ಕೊನ್ನೆಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ. ಕೊನ್ನೆಲ್ ಅವರು ಮುಂದಿನ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ರಾಜ್ಯ ಗುಪ್ತಚರ ಇಲಾಖೆಗಳು ಸಂಗ್ರಹಿಸಿರುವ ಗುಪ್ತಚರ ಮಾಹಿತಿಗಳ ಸಂಗ್ರಹ, ಹಂಚುವಿಕೆ, ಮತ್ತು ಕ್ರಮಕೈಗೊಳ್ಳುವ ಕುರಿತು ರಾಷ್ಟ್ರಮಟ್ಟದಲ್ಲಿ ನೋಡಲ್ ಏಜೆನ್ಸಿಯೊಂದನ್ನು ಸ್ಥಾಪಿಸಲು ಸರ್ಕಾರ ಯೋಜಿಸುತ್ತಿದೆ.
ಈ ಪ್ರಕ್ರಿಯೆಯಲ್ಲಿ ಗೃಹಸಚಿವ ಪಿ.ಚಿದಂಬರಂ ಅವರು ಸ್ವತಹ ತೊಡಗಿಸಿಕೊಂಡಿದ್ದಾರೆ. ಅವರು ರಾ ಮತ್ತು ಗುಪ್ತಚರ ಇಲಾಖೆಯ ನಡುವೆ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆಯನ್ನು ಚುರುಕುಗೊಳಿಸಲು ಮುಂದಾಗಿದ್ದಾರೆ. |