ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ದೇಶನ ಪಡೆಯುತ್ತಿರುವುದಾಗಿ ತನಿಖಾ ಸಂಸ್ಥೆ ಸಿಬಿಐ, ಸುಪ್ರೀಂ ಕೋರ್ಟಿಗೆ ಹೇಳಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ, ಕನಿಷ್ಠ ರಾಜಕೀಯ ಸೂಕ್ಷ್ಮ ಪ್ರಕರಣಗಳಲ್ಲಾದರೂ ಕೇಂದ್ರ ಸರಕಾರದ ಸಲಹೆಗಳನ್ನು ಪಡೆಯುವುದಾಗಿ ಸಿಬಿಐ ಹೇಳಿಕೊಂಡಿದೆ.
ಕೇಂದ್ರ ಸರ್ಕಾರದ ಕಾನೂನು ಸಲಹೆಗಳು ಮತ್ತು ನಿರ್ದೇಶನದ ಮೇಲೆ ನಿರ್ದಿಷ್ಟ ಅರ್ಜಿಯೊಂದನ್ನು ಹಿಂತೆಗೆಯುವುದಾಗಿ ಮುಲಾಯಂ ಸಿಂಗ್ ಮತ್ತು ಕುಟುಂಬದವರ ವಿರುದ್ಧ ಹೂಡಲಾಗಿರುವ ಪ್ರಕರಣಕ್ಕೆ ಸಂಬಂಧಸಿದಂತೆ ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಸುಪ್ರೀಂ ಕೋರ್ಟ್ 2007ರ ಮಾರ್ಚ್ ಒಂದರಂದು ನೀಡಿರುವ ಆದೇಶದಂತೆ ಸಿಬಿಐ, ಯಾದವ್, ಅವರ ಪುತ್ರರಾದ ಅಖಿಲೇಶ್, ಪ್ರತೀಕ್ ಮತ್ತು ಸೊಸೆ ಡಿಂಪಲ್ ಅವರುಗಳ ವಿರುದ್ಧ ಪ್ರಾಥಮಿಕ ತನಿಖೆಯನ್ನು ಪೂರೈಸಿದೆ.
ಪ್ರಕರಣದ ನೋಂದಾವಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಲ್ಲವೇ ರಾಜ್ಯ ಸರ್ಕಾರಕ್ಕೆ ಯಾವುದೇ ಶಿಫಾರಸ್ಸು ಮಾಡುವುದಿಲ್ಲ ಎಂದಿದ್ದ ಸಿಬಿಐ, ಹೆಚ್ಚಿನ ಕ್ರಮ ಕೈಗೊಳ್ಳಲು ಪ್ರಾಥಮಿಕ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ತನ್ನ ಆದೇಶಕ್ಕೆ ತಿದ್ದುಪಡಿ ತರುವಂತೆ ಸಿಬಿಐ 2007ರ ಅಕ್ಟೋಬರ್‌ನಲ್ಲಿ ನ್ಯಾಯಾಲಯವನ್ನು ವಿನಂತಿಸಿತ್ತು. ಆದರೆ, ಇದರ ಬದಲಿಗೆ ತನಿಖಾ ವರದಿಯನ್ನು ನೇರವಾಗಿ ಸುಪ್ರೀಂ ಕೋರ್ಟಿಗೆ ಸಲ್ಲಿಸಲು ಸಿಬಿಐ ಬಯಸಿದ್ದು, ಪ್ರಕರಣದಲ್ಲಿ ಮುಂದುವರಿಯಲು ನಿರ್ದೇಶನ ಬಯಸಿತ್ತು. ಪ್ರಾಥಮಿಕ ತನಿಖೆಯಲ್ಲಿ ಆರೋಪಿತರು ಅಪರಾಧ ಎಸಗಿರುವುದು ಕಂಡು ಬಂದಿರುವ ಕಾರಣ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಪ್ರಕಾರ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಬಿಐ ವಿವರಿಸಿತ್ತು.
ಸಿಬಿಐ ಅರ್ಜಿಗೆ ಪ್ರತಿಕ್ರಿಯಿಸಲು ಯಾದವ್ ಕುಟುಂಬ ವಿಫಲವಾಗಿರುವ ಹಿನ್ನಲೆಯಲ್ಲಿ ಪ್ರಕರಣದಲ್ಲಿ ಮುಂದುವರಿದು ನಿರ್ಧಾರ ಕೈಗೊಳ್ಳುವಂತೆ ಸಿಬಿಐ ನ್ಯಾಯಾಲಯವನ್ನು ವಿನಂತಿಸಿತ್ತು. ಆದರೆ ಇದೀಗ ಸಮಾಜವಾದಿ ಪಕ್ಷವು ಕಾಂಗ್ರೆಸ್ ಮೈತ್ರಿಗೆ ಮುಂದಾಗಿರುವ ಬಳಿಕ ಸಿಬಿಐ ತನ್ನ ನಿಲುವನ್ನು ಬದಲಿಸಿರುವಂತೆ ಕಾಣುತ್ತದೆ. |