ಇಸ್ಲಾಮಾಬಾದ್: ಬಂಧಿತ ಅಮೀರ್ ಅಜ್ಮಲ್ ಕಸಬ್ ತನ್ನವನೆಲ್ಲ ಎಂದು ಲಷ್ಕರೆ-ಇ-ತೋಯ್ಬಾ ಮತ್ತು ಜಮಾತ್-ಉದ್-ದಾವ ಹೇಳಿಕೊಳ್ಳುತ್ತಿದ್ದರೂ, ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸೆರೆ ಸಿಕ್ಕ ಉಗ್ರನ ಚಿತ್ರವನ್ನು ನೋಡಿದ ಪಾಕಿಸ್ತಾನಿ ಪ್ರಜೆಯಾಗಿರುವ ಕಸಬ್‌ನ ತಂದೆ, ಈತ ತನ್ನ ಮಗನೆಂದು ಒಪ್ಪಿಕೊಂಡಿದ್ದಾನೆ.
ಅಮೀರ್ ಕಸಬ್, ಅಜ್ಮಲ್ ಅಮೀರ್ ಇಮಾನ್ ಅಲಿಯಾಸ್ ಅಜ್ಮಲ್ ಕಸಬ್ ತನ್ನ ಪುತ್ರನೆಂದು ಒಪ್ಪಿಕೊಂಡ ವೇಳೆ ಆತನ ದುಃಖದ ಕಟ್ಟೆ ಒಡೆಯಿತು ಎಂದು ಪಾಕಿಸ್ತಾನದ ಪ್ರಭಾವಿ ಪತ್ರಿಕೆ ಡಾನ್ ವರದಿ ಹೇಳಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಓಕಾರ ಜಿಲ್ಲೆಯ ಫರೀದ್‌ಕೋಟ್ ಗ್ರಾಮದಲ್ಲಿರುವ ತನ್ನ ಮನೆಯ ಅಂಗಳದಲ್ಲಿ ಡಾನ್ ಪತ್ರಿಕೆಯೊಂದಿಗೆ ಮಾತನಾಡಿರುವ ಅಮೀರ್, "ಮೊದಲ ಕೆಲವು ದಿನಗಳಲ್ಲಿ ಆತ ತನ್ನ ಮಗನಾಗಿರಲಿಕ್ಕಿಲ್ಲ ಎಂದು ಯೋಚಿಸಿದ್ದೆ ಮತ್ತು ಆತ ತನ್ನ ಪುತ್ರನಲ್ಲ ಎಂದು ಹೇಳುತ್ತಿದ್ದೆ. ಆದರೆ ಇದು ಸತ್ಯ. ಹಾಗಾಗಿ ಆತ ತನ್ನ ಮಗನೆಂದು ನಾನೀಗ ಒಪ್ಪಿಕೊಳ್ಳುತ್ತೇನೆ. ನಾನು ಆತನ ಚಿತ್ರವನ್ನು ಪತ್ರಿಕೆಗಳಲ್ಲಿ ನೋಡಿದ್ದೇನೆ. ಇದು ತನ್ನ ಪುತ್ರ ಅಜ್ಮಲ್" ಎಂಬುದಾಗಿ ಆತ ಉಗ್ರ ಅಜ್ಮಲ್ ಬಂಧನದ ಬಳಿಕ ಮಾಧ್ಯಮಕ್ಕೆ ನೀಡಿರುವ ಪ್ರಥಮ ಸಂದರ್ಶನದಲ್ಲಿ ಹೇಳಿದ್ದಾನೆ.
ಇಮಾಮ್ ಫರೀದ್‌ಕೋಟ್‌ಗೆ ಸೇರಿದಾತ ಮತ್ತು ಆತ ಕೆಲವು ಸಮಯಗಳ ಹಿಂದೆ ಲಷ್ಕರೆ ಸಂಘಟನೆ ಸೇರಿದ್ದ ಎಂಬುದಾಗಿ ಈ ಹಿಂದೆ ಬ್ರಿಟನ್ನಿನ ಅಬ್ಸರ್ವರ್ ಪತ್ರಿಕೆ ಮತ್ತು ಬಿಬಿಸಿ ವರದಿ ಮಾಡಿದ್ದವು.
ಈ ಅಬ್ಸರ್ವರ್ ಪತ್ರಿಕೆಯ ವರದಿಗಾರ ಫರೀದ್‌ಕೋಟ್‌ಗೆ ತೆರಳಿದ್ದು, ಅಜ್ಮಲ್‌ನ ಹೆಸರು ಅಲ್ಲಿನ ಮತದಾರರ ಪಟ್ಟಿಯಲ್ಲಿದೆ ಎಂದು ಹೇಳಿದ್ದರು ಮತ್ತು ಆತನ ಮತದಾರರ ಗುರುತು ಚೀಟಿಯ ಸಂಖ್ಯೆಯನ್ನೂ ಪ್ರಕಟಿಸಿದ್ದರು.
ಅತೀವ ಬಡತನದ ಹಿನ್ನೆಲೆಯ ಈ ಹುಡುಗ ಹೊಟ್ಟೆಪಾಡಿಗಾಗಿ ಮನೆಯಿಂದ ಹೊರಬಿದ್ದಿದ್ದು, ಸಣ್ಣಪುಟ್ಟ ಕಳ್ಳತನವನ್ನು ಮಾಡುತ್ತಿದ್ದು, ಬಳಿಕ ಉಗ್ರಗಾಮಿ ಸಂಘಟನೆ ಸೇರಿದ್ದ ಎಂದು ಹೇಳಲಾಗಿದೆ.
"ಹಬ್ಬಕ್ಕೆ ಹೊಸಬಟ್ಟೆ ಕೊಡಿಸು ಎಂದು ಆತ ನನ್ನನ್ನು ಕೇಳಿದ್ದ. ಆದರೆ ನಾನು ಹೊಸಬಟ್ಟೆ ಕೊಡಿಸುವ ಪರಿಸ್ಥಿತಿಯಲ್ಲಿರಲಿಲ್ಲ. ಹಾಗಾಗಿ ಆತ ಸಿಟ್ಟಿನಿಂದ ನಾಲ್ಕು ವರ್ಷಗಳ ಹಿಂದೆ ಮನೆ ತ್ಯಜಿಸಿದ್ದ" ಎಂದು ಅಜ್ಮಲ್ ತಂದೆ ಹೇಳಿಕೊಂಡಿದ್ದಾನೆ.
ಮೂರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ಅಮೀರ್ ಕಸಬ್‌ಗೆ ಅಜ್ಮಲ್‌ನ ಚಿತ್ರ ತೋರಿಸಿದಾಗ ದುಃಖ ತಡೆಯಲಾಗಲಿಲ್ಲ. ಡಾನ್ ವರದಿಗಾರರೊಂದಿಗೆ ಮಾತನಾಡಲು ಅಜ್ಮಲ್‌ನ ತಾಯಿ ನಿರಾಕರಿಸಿದರೂ, ಅಮೀರ್ ಮಾತ್ರ ಈ ಕುರಿತು ಮಾತನಾಡಲು ತನಗೆ ಸಮಸ್ಯೆ ಏನಿಲ್ಲ ಎಂದು ಹೇಳಿದ್ದಾನೆ. ಹವೇಲಿ ಲಾಖಾದಿಂದ ಹಲವು ವರ್ಷಗಳ ಹಿಂದೆ ವಲಸೆ ಬಂದು ಇಲ್ಲಿ ನೆಲೆಸಿರುವ ಅಮೀರ್ ಸ್ವಂತ ಮನೆಯನ್ನು ಹೊಂದಿದ್ದಾನೆ. ಫರೀದ್‌ಕೋಟ್‌ನ ಬೀದಿಗಳಲ್ಲಿ ಪಕೋಡ ಮಾರುತ್ತಾ ಈತ ತನ್ನ ಕುಟುಂಬದ ಹೊಟ್ಟೆ ಹೊರೆಯುತ್ತಾನೆ.
ಅಂಗಳದ ಮೂಲೆಯಲ್ಲಿರುವ ಕೈಗಾಡಿಯನ್ನು ತೋರಿಸಿದ ಆತ, ಇದೊಂದೆ ತನ್ನ ಏಕೈಕ ಆಸ್ತಿ ಎಂದು ಹೇಳಿದನೆಂದು ಡಾನ್ ವರದಿಯಲ್ಲಿ ಹೇಳಲಾಗಿದೆ. |