ಭಾರತದ ಅರಣ್ಯದಲ್ಲಿ ಇಂದು ಅಳಿದು ಉಳಿದರುವ ವ್ಯಾಘ್ರ ಸಂತತಿಯ ಸಂಖ್ಯೆ ಸುಮಾರು 1,500 ಮಾತ್ರ ಎಂದು ಅಧಿಕೃತ ಸಮೀಕ್ಷೆಯೊಂದು ಹೇಳಿದೆ. ಆಘಾತಕಾರಿ ವಿಚಾರವೆಂದರೆ, ಕೇವಲ ಆರು ವರ್ಷಗಳ ಹಿಂದಿನ ಗಣತಿಯಲ್ಲಿ ಹುಲಿಗಳ ಸಂಖ್ಯೆ 3,652ರಷ್ಟಿದ್ದುದು ಇದೀಗ ಅರ್ಧಕ್ಕಿಂತಲೂ ಕೆಳಕ್ಕಿಳಿದಿದೆ.ಅರಣ್ಯ ಹಾಗೂ ಪರಿಸರ ಸಚಿವಾಲಯದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಡೆಹರಡೂನ್ ಮೂಲದ ಅರಣ್ಯ ಪ್ರಾಣಿ ಸಂಸ್ಥೆ ಜಂಟಿಯಾಗಿ ಸಮೀಕ್ಷೆ ಕೈಗೊಂಡಿದ್ದು, 'ಭಾರತದಲ್ಲಿ ಹುಲಿಗಳ ಸ್ಥಿತಿಗತಿ, ಸಹ-ಪರಭಕ್ಷಕ ಪ್ರಾಣಿ ಮತ್ತು ಶಿಕಾರಿ' ಎಂಬ ಹೆಸರಿನ ಒಂದು ಕಿರುಹೊತ್ತಿಗೆಯನ್ನು ಹೊರತಂದಿದೆ.ಈ ವರದಿಯ ಪ್ರಕಾರ ಭಾರತದಲ್ಲಿ ಕೇವಲ 1,500 ಹುಲಿಗಳು ಉಳಿದುಕೊಂಡಿವೆ. ಅದಾಗ್ಯೂ,ಈ ಅಂಕಿಅಂಶಗಳಲ್ಲಿ ಜಾರ್ಖಂಡ್ ಮತ್ತು ಸುಂದರ್ಬನ್ ಪ್ರದೇಶಗಳ ಹುಲಿ ಸಂತತಿಯ ಸಂಖ್ಯೆ ಸೇರಿಲ್ಲ.ಹುಲಿ ಬೇಟೆ, ಗುಣಮಟ್ಟದ ವಾಸಸ್ಥಾನ ಮತ್ತು ಹುಲಿಗಳಿಗೆ ಆಹಾರ ಬೇಟೆಯ ಕೊರತೆಯೂ ಹುಲಿಗಳ ಸಂಖ್ಯೆಯ ಇಳಿಮುಖಕ್ಕೆ ಕಾರಣ ಎಂದು ವರದಿಯಲ್ಲಿ ಬೆಟ್ಟು ಮಾಡಲಾಗಿದೆ. ಆದರೆ ಅವುಗಳ ಸಂತಂತಿಯನ್ನು ಹೆಚ್ಚಿಸಲು ಇನ್ನೂ ಅವಕಾಶವಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಲಾಗಿದೆ.2001-02 ರಲ್ಲಿ ಗಣತಿ ಪ್ರಕಾರ ಭಾರತದಲ್ಲಿ ಒಟ್ಟು 3,642 ಹುಲಿಗಳು ಉಳಿದುಕೊಂಡಿದ್ದವು. ಈ ಅಂಕಿಅಂಶವನ್ನು ಗಣನೆಗೆ ತೆಗೆದುಕೊಂಡರೆ, ಹುಲಿಗಳ ಸಂಖ್ಯೆಯಲ್ಲಿ ಈ ಬಾರಿ 60ಶೇ. ದಷ್ಟು ಇಳಿಕೆ ಕಂಡಿದೆ. ಶತಮಾನಗಳ ಹಿಂದೆ ಇವುಗಳ ಸಂಖ್ಯೆ 40 ಸಾವಿರವಿತ್ತು.ಶಿವಾಲಿಕ್ ಗ್ಯಾಂಗ್ಟಕ್ ಪ್ರದೇಶ, ಪಶ್ಚಿಮಘಟ್ಟ ಸಂಕೀರ್ಣ, ಪೂರ್ವಘಟ್ಟ ಹಾಗೂ ಈಶಾನ್ಯ ಬೆಟ್ಟಗಳೆಂಬ ನಾಲ್ಕು ವಿಭಾಗಗಳನ್ನಾಗಿಸಿ ಸಮೀಕ್ಷೆ ನಡೆಸಲಾಗಿದೆ. |