ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಮರಳಿ ಅಧಿಕಾರ ಧಕ್ಕಿಸಿ ಕೊಡುವಲ್ಲಿ ಪ್ರಮುಖ ಪಾತ್ರವಹಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು.57 ರ ಹರೆಯದ ಅಶೋಕ್ ಗೆಹ್ಲೋಟ್ ಇದೀಗ ಎರಡನೆ ಬಾರಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. 1998ರಿಂದ 2003ರ ತನಕದ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ಶನಿವಾರ ನಡೆದ ಸಮಾರಂಭದಲ್ಲಿ ಅಪಾರ ಜನಸ್ತೋಮದೆದುರು ರಾಜ್ಯಪಾಲ ಎಸ್.ಕೆ. ಸಿಂಗ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕಿಂತ ಹೆಚ್ಚಿನ ಸವಾಲನ್ನು ಅವರು ಮುಖ್ಯಮಂತ್ರಿ ಸ್ಥಾನ ಪಡೆಯುವಲ್ಲಿ ಎದುರಿಸಿದ್ದರು. ಮುಖ್ಯಮಂತ್ರಿ ಪದಾಕಾಂಕ್ಷಿಗಳಾಗಿದ್ದ, ಜಾಟ್ ಸಮುದಾಯದ ಮುಖಂಡರಾದ ಸಿಸ್ ರಾಮ್ ಓಲಾ, ಪರಾಸರಮ್ ಮಹೇಂದ್ರ ಮತ್ತು ಕೇವಲ ಒಂದು ಮತದ ಅಂತರಿಂದ ಸೋಲನ್ನಪ್ಪಿದ್ದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ಜೋಷಿ ಅವರ ಸ್ಫರ್ಧೆಯನ್ನು ಗೆಹ್ಲೋಟ್ ಎದುರಿಸಬೇಕಾಗಿತ್ತು. |