ದೇಶದಲ್ಲಿ ವ್ಯಾಪಿಸಿಕೊಂಡಿರುವ ಭಯೋತ್ಪಾದನೆ ಕುರಿತಂತೆ ಈಗಾಗಲೇ ಜನಸಾಮಾನ್ಯರ ಆಕ್ರೋಶಕ್ಕೆ ತುತ್ತಾಗಿರುವ ರಾಜಕಾರಣಿಗಳು ಮತ್ತೆ ಪ್ರಜೆಗಳ ವಕ್ರದೃಷ್ಟಿಗೆ ಬಿದ್ದಿದ್ದಾರೆ. ಭಯೋತ್ಪಾದನೆ ವಿರುದ್ಧ ಏಕತ್ರವಾಗಿ ಸಂಸತ್ತಿನಲ್ಲಿ ಗುರುವಾರ ಮಾತನಾಡಿದ್ದ ಸಂಸದರು, ಮೂರೇ ದಿನದಲ್ಲಿ ಈ ಏಕತೆಯನ್ನೆಲ್ಲಾ ಮರೆತು, 2001 ಡಿಸೆಂಬರ್ 13ರಂದು ನಡೆದ ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದವರು ಕೇವಲ 10 ಮಂದಿ ಸಂಸದರು!
ಲೋಕಸಭೆ ಸ್ಪೀಕರ್ ಸೋಮನಾಥ ಚಟರ್ಜಿ, ಪ್ರಧಾನಿ ಮನಮೋಹನ್ ಸಿಂಗ್, ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮತ್ತು ಇತರ ಕೆಲವಷ್ಟು ಮಂದಿ ಪುಷ್ಪಗುಚ್ಛವಿರಿಸಿ ಅಗಲಿದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಂಸತ್ ಮೇಲಿನ ದಾಳಿ ಸಂದರ್ಭ ನಡೆದ ಕಾರ್ಯಾಚರಣೆಯಲ್ಲಿ ಮಡಿದ ದೆಹಲಿ ಪೊಲೀಸ್ ಅಧಿಕಾರಿ ಘನಶ್ಯಾಮ್ ಸಿಂಗ್ ಅವರ ವಿಧವೆ ಮತ್ತು ಪುತ್ರ ಮತ್ತಿತರರು ಕೂಡ ಇದೇ ಸಂದರ್ಭ ಹಾಜರಿದ್ದರು.
ಲೋಕಸಭೆ ಮತ್ತು ರಾಜ್ಯಸಭೆಗಳೆರಡೂ ಸಂಸತ್ ದಾಳಿಯ ಹುತಾತ್ಮರಿಗೆ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿದ್ದವು. ದೆಹಲಿ ಪೊಲೀಸ್ ಇಲಾಖೆಯ ಐವರು ಸಿಬ್ಬಂದಿ, ಸಿಆರ್‌ಪಿಎಫ್‌ನ ಒಬ್ಬ ಮಹಿಳಾ ಕಾನ್‌ಸ್ಟೇಬಲ್ ಮತ್ತು ಸಂಸತ್ತಿನ ಇಬ್ಬರು ಭದ್ರತಾ ಸಹಾಯಕರು ಸಂಸತ್ ಮೇಲಿನ ದಾಳಿ ತಡೆಯುವ ಹೋರಾಟದಲ್ಲಿ ಪ್ರಾಣ ತೆತ್ತಿದ್ದರು. ಕೆಲಸದಾಳು ಮತ್ತು ಒಬ್ಬ ಛಾಯಾಚಿತ್ರಕಾರರೂ ಮಡಿದಿದ್ದರು. ವಿವಿಧ ಸರಕಾರಗಳು ನೀಡಿದ ವಾಗ್ದಾನವನ್ನು ಈಡೇರಿಸಿಲ್ಲ ಎಂದು ಈ ಹುತಾತ್ಮರ ಕುಟುಂಬಗಳು ಕಳೆದ ಕೆಲವು ಸಮಯಗಳಿಂದ ಧ್ವನಿ ಎತ್ತುತ್ತಲೇ ಬಂದಿವೆ. |