ರಾಜಸ್ಥಾನದಲ್ಲಿ ಅಧಿಕಾರ ವಹಿಸುತ್ತಲೇ, ನೂತನ ಮುಖ್ಯಮಂತ್ರಿ ಕಾಂಗ್ರೆಸ್‌ನ ಅಶೋಕ್ ಗೆಹ್ಲೋಟ್ ಅವರು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಅವರ ಸರಕಾರದ ವಿರುದ್ಧ ಮಾಡಲಾಗಿರುವ ವಿವಿಧ ಆರೋಪಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ." ತನಿಖೆಯ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ವಸುಂಧರಾ ರಾಜೆ ಹಾಗೂ ಅವರ ಸರಕಾರದ ಮೇಲಿರುವ ವಿವಿಧ ಆರೋಪಗಳ ಕುರಿತು ಗಮನಹರಿಸಲು ತನ್ನ ಅಧಿಕಾರಿಗಳಿಗೆ ತಿಳಿಸಿದ್ದೇನೆ" ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ವರದಿಗಾರರಿಗೆ ತಿಳಿಸಿದ್ದಾರೆ. ಅವರು ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಆದರೆ, ಈ ಪ್ರಕರಣಗಳನ್ನು ಮುಂದುವರಿಸುವ ವೇಳೆ ತನ್ನ ಸರಕಾರವು ಪ್ರತೀಕಾರ ಮನೋಭಾವ ಹೊಂದುವುದಿಲ್ಲ ಎಂದು ಹೇಳಿದ್ದಾರೆ.ರಾಜೆ ಆಡಳಿತಾವಧಿಯಲ್ಲಿ ಭೂಹಗರಣಗಳು ಮತ್ತು ಹಣಕಾಸು ಅವ್ಯವಹಾರಗಳು ನಡೆದಿವೆ ಎಂಬುದಾಗಿ ಚುನಾವಣಾ ಪ್ರಚಾರದ ವೇಳೆ ಗೆಹ್ಲೋಟ್ ಆರೋಪಿಸಿದ್ದರು. ಆಕೆಯ ಆಡಳಿತಾವಧಿಯಲ್ಲಿ ಸಹಿಹಾಕಲಾಗಿರುವ ವಿವಿಧ ತಿಳುವಳಿಕಾ ಪತ್ರಗಳು ಮತ್ತು ಭರವಸೆಗಳು ಜಾರಿಯಾಗಿಲ್ಲ ಎಂದೂ ಅವರು ಆರೋಪಿಸಿದ್ದರು.ರಾಜೆಯವರ ಅವ್ಯವಹಾರಗಳ ಕುರಿತು ಬಿಜೆಪಿ ನಾಯಕರೇ ಆರೋಪ ಹೊರಿಸಿದ್ದಾರೆ ಎಂದೂ ಗೆಹ್ಲೋಟ್ ಹೇಳಿದ್ದಾರೆ. |