ನವೆಂಬರ್ 26ರ ಮುಂಬಯಿ ದಾಳಿ ಪ್ರಕರಣದಲ್ಲಿ ಜೀವಂತ ಸೆರೆಸಿಕ್ಕಿರುವ ಏಕೈಕ ಉಗ್ರಗಾಮಿ ಮಹಮದ್ ಅಜ್ಮಲ್ ಅಮಿನ್ ಕಸವ್ ಪರವಾಗಿ ನ್ಯಾಯಾಲಯದಲ್ಲಿ ವಾದಿಸಲು ಮುಂದಾಗಿರುವ ವಕೀಲರೊಬ್ಬರ ಮನೆಗೆ ಶಿವಸೈನಿಕರು ದಾಳಿ ಮಾಡಿ, ದಾಂಧಲೆ ಎಬ್ಬಿಸಿದ ಘಟನೆ ಸೋಮವಾರ ನಡೆದಿದೆ.
ಲಾಠಿಗಳೊಂದಿಗೆ ಆಗಮಿಸಿದ ಶಿವಸೇನಾ ಕಾರ್ಯಕರ್ತರು, ಅಜ್ಮಲ್ ಪರವಾಗಿ ವಕಾಲತ್ತು ನಡೆಸುವುದಾಗಿ ಹೇಳಿದ ವಿಜಯ್ ಕಾಲನಿ ನಿವಾಸಿ ವಕೀಲ ಮಹೇಶ್ ದೇಶಮುಖ್ ಅವರ ಕಚೇರಿಗೆ ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಕ್ರೋಶಿತ ಶಿವಸೈನಿಕರು ದೇಶ್‌ಮುಖ್ ಕಚೇರಿಯಿದ್ದ ನಿವಾಸಕ್ಕೆ ದಾಳಿ ನಡೆಸಿ, ದಾಂಧಲೆಗೈದರು. ಟೆಲಿಫೋನ್ ಮತ್ತು ಪೀಠೋಪಕರಣಗಳು, ದಾಖಲೆ ಪತ್ರಗಳು, ಪುಸ್ತಕಗಳನ್ನು ಹಾಳುಗೆಡಹಿದರು ಎಂದು ಪೊಲೀಸರು ತಿಳಿಸಿದರು. ಮಾತ್ರವಲ್ಲ, ಹೊರಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೂ ಹಾನಿಯುಂಟು ಮಾಡಿದ್ದಾರೆ.
ಅಜ್ಮಲ್ ಪರವಾಗಿ ಯಾರೂ ವಾದಿಸಬಾರದು ಎಂದು ಬಾರ್ ಅಸೋಸಿಯೇಶನ್ ಆಫ್ ಇಂಡಿಯಾ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ದೇಶ್‌ಮುಖ್ ಅವರ ಭಯೋತ್ಪಾದಕನ ಪರವಾಗಿ ವಾದಿಸುವುದನ್ನು ಶಿವಸೈನಿಕರು ವಿರೋಧಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಅಜ್ಮಲ್ ಇಚ್ಛಿಸಿದರೆ ಆತನ ಪರವಾಗಿ ವಾದಿಸುವಂತಾಗಲು, ಆತನನ್ನು ಭೇಟಿಯಾಗಲು ತನಗೆ ಅವಕಾಶ ನೀಡಬೇಕೆಂದು ಕೋರಿ ದೇಶ್‌ಮುಖ್ ಅವರು ಸೋಮವಾರ ಮುಂಬಯಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ತಮ್ಮ ಸಹಾಯಕರನ್ನು ಕಳುಹಿಸಿದ್ದರು.
ದೇಶ್‌ಮುಖ್ ಅವರ ಮೇಲೆ ಹಾಗೂ ಸ್ಥಳದಲ್ಲಿದ್ದ ಇಬ್ಬರು ಪೊಲೀಸರ ಮೇಲೂ ಶಿವಸೈನಿಕರು ಕೈಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಅಮರಾವತಿ ಬಾರ್ ಅಸೋಸಿಯೇಶನ್ ಪದಾಧಿಕಾರಿಗಳನ್ನು ಭೇಟಿಯಾದ ಶಿವಸೈನಿಕರು, ಒಕ್ಕೂಟದ ನಿರ್ಣಯದ ವಿರುದ್ಧ ವರ್ತಿಸುತ್ತಿರುವ ದೇಶ್‌ಮುಖ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. |