ವರ್ಷಗಳಿಂದ ಮೀನ ಮೇಷ ಎಣಿಸುತ್ತಾ, ಮುಂಬಯಿ ಭಯೋತ್ಪಾದಕ ದಾಳಿ ಪ್ರಕರಣ ಬಳಿಕ ಎಚ್ಚೆತ್ತುಕೊಂಡಂತೆ ಕಂಡುಬಂದಿರುವ ಕೇಂದ್ರದ ಯುಪಿಎ ಸರಕಾರ, ಆಂತರಿಕ ಭದ್ರತೆಯ ನಿಟ್ಟಿನಲ್ಲಿನ ವೈಫಲ್ಯಗಳನ್ನು ಒಪ್ಪಿಕೊಂಡು, ಭಯೋತ್ಪಾದಕ ಕೃತ್ಯಗಳ ತನಿಖೆಗಾಗಿ ಫೆಡರಲ್ ಏಜೆನ್ಸಿಯೊಂದನ್ನು ಹುಟ್ಟುಹಾಕಲು ನಿರ್ಧರಿಸಿದೆ. ಅಲ್ಲದೆ, ಈ ಕುರಿತು ಈಗಿರುವ ಕಾನೂನಿಗೇ ಕಠಿಣ ನಿಯಮಾವಳಿಗಳನ್ನು ಸೇರಿಸುವ ಮೂಲಕ ತಿದ್ದುಪಡಿ ತರಲು ಕೊನೆಗೂ ನಿರ್ಧಾರ ಮಾಡಿದೆ.
ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ರಚಿಸಲು ನಿರ್ಧರಿಸಿ, ಮಂಗಳವಾರವೇ ಈ ಪ್ರಸ್ತಾಪವನ್ನು ಸಂಸತ್ತಿನ ಮುಂದಿಡುವ ಸಾಧ್ಯತೆಗಳಿವೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಗೆ ತಿದ್ದುಪಡಿ ತಂದು ಅದನ್ನು ಮತ್ತಷ್ಟು ಕಠಿಣಗೊಳಿಸುವ ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಮಂಡಳಿ (ಸಿಐಎಸ್ಎಫ್) ಕಾಯಿದೆಗೂ ತಿದ್ದುಪಡಿ ತರುವ ಪ್ರಸ್ತಾಪಗಳು ಸಂಸತ್ತಿನ ಮುಂದೆ ಬರಲಿವೆ.
ಸಾಕ್ಷ್ಯವಾಗಿ ವೈರ್‌ಲೆಸ್ ಧ್ವನಿಮುದ್ರಣಗಳ ಬಳಕೆ, ಕ್ಯಾಮರಾ ಎದುರು ವಿಚಾರಣೆ ಮತ್ತು ಭಯೋತ್ಪಾದನಾ ಪ್ರಕರಣಗಳ ತ್ವರಿತ ವಿಚಾರಣೆಗೆ ತ್ವರಿತ ವಿಶೇಷ ನ್ಯಾಯಾಲಯಗಳ ಪ್ರಸ್ತಾಪಗಳು ಈ ಹೊಸ ತಿದ್ದುಪಡಿಯಲ್ಲಿ ಅಡಕವಾಗಿವೆ.
ಎನ್ಐಎ ದೇಶದೆಲ್ಲೆಡೆ ನಡೆಯುವ ಭಯೋತ್ಪಾದನಾ ಚಟುವಟಿಕೆಗಳ ಪ್ರಕರಣಗಳನ್ನು ರಾಜ್ಯಗಳ ವಿಶೇಷ ಅನುಮತಿಯ ಅಗತ್ಯವಿಲ್ಲದೆಯೇ ನೇರವಾಗಿ ಕೈಗೆತ್ತಿಕೊಳ್ಳಲಿದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆಯ ಅಧಿಕಾರವು ರಾಜ್ಯಗಳ ಕೈಯಲ್ಲೇ ಇರುತ್ತವೆ. ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ನಕಲಿ ನೋಟು ಮುದ್ರಣಗಳನ್ನು ಕೂಡ ಭಯೋತ್ಪಾದನೆಯಡಿಗೆ ತರಲಾಗಿದ್ದು, ಇವುಗಳನ್ನೆಲ್ಲ ಎನ್ಐಎ ತನಿಖೆ ಮಾಡಲಿದೆ. |