ಪಾಕಿಸ್ತಾನದ ಮೇಲೆ ದಂಡೆತ್ತಿ ಹೋಗುವ ಇರಾದೆ ತನಗಿಲ್ಲ ಎಂದು ಮಂಗಳವಾರ ಹೇಳಿರುವ ಭಾರತ, ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳಲು ನೆರೆದೇಶವು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ." ನಾವು ಯಾವುದೇ ಸೇನಾ ಕಾರ್ಯಾಚರಣೆಯನ್ನು ಯೋಜಿಸುತ್ತಿಲ್ಲ. ಆದರೆ, ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರು ಮತ್ತು ಮುಂಬೈ ದಾಳಿಯ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪರಿಸ್ಥಿತಿ ನೆಟ್ಟಗಿರದು" ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ.ಅವರು ಬಾಂಗ್ಲಾದೇಶ ಮುಕ್ತಿ ಯುದ್ಧದಲ್ಲಿ ಪಾಕಿಸ್ತನಾದ ಮೇಲೆ ಜಯ ಸಾಧಿಸಿರುವ 37ನೆ ವರ್ಷದ ಸಂಭ್ರಮಾಚರಣೆ ವಿಜಯ ದಿವಸ್ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸಮಾರಂಭ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಭಾರತ-ಪಾಕಿಸ್ತಾನ ಗಡಿಯಲ್ಲಿ ಪಡೆಗಳ ನಿಯೋಜನೆ ಕುರಿತು ಮಾತನಾಡಿದ ಅವರು ಅಲ್ಲಿನ ಪರಿಸ್ಥಿತಿ ಸಹಜವಾಗಿದೆ ಮತ್ತು ಸಶಸ್ತ್ರ ಪಡೆಗಳು ಯಾವತ್ತೂ ಸನ್ನದ್ಧವಾಗಿವೆ ಎಂದು ಹೇಳಿದ್ದಾರೆ.ಗಡಿನಿಯಂತ್ರಣ ರೇಖೆಯಲ್ಲಿ ಹೇರಲಾಗಿರುವ ಕದನ ವಿರಾಮವನ್ನು ಭಾರತ ಹಿಂಪಡೆಯಲು ಭಾರತ ಯೋಜಿಸುತ್ತಿದೆ ಎಂಬುದನ್ನು ಆಂಟನಿ ನಿರಾಕರಿಸಿದ್ದಾರೆ. ಕದನವಿರಾಮ ಘೋಷಣೆಯನ್ನು ಹಿಂಪಡೆಯಲಾಗುವುದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಅಂತಹುದೇನಿಲ್ಲ ಎಂದು ಹೇಳಿದರು.ಪ್ರಸಕ್ತ ಸ್ಥಿತಿಯಲ್ಲಿ ಭಾರತದ ಕೈಗೊಳ್ಳುವ ಕ್ರಮಗಳ ಕುರಿತು ಮಾಹಿತಿ ನೀಡಲು ನಿರಾಕರಿಸಿರುವ ಅವರು ಪಾಕಿಸ್ತಾನವು ಭಯೋತ್ಪಾದಕರ ವಿರುದ್ಧ ನಿಷ್ಕಪಟ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು." ನಾವು ಕೈಗೊಳ್ಳುವ ಕ್ರಮಗಳ ಕುರಿತು ಹೇಳಲಾರೆ, ಆದರೆ ಒಂದಂತೂ ನಿಜ, ಪಾಕಿಸ್ತಾನವು ಹೇಳುತ್ತಿರುವುದರ ಕುರಿತು ಪ್ರಾಮಾಣಿಕ ಕ್ರಮಕೈಗೊಳ್ಳದೇ ಹೋದರೆ ಪರಿಸ್ಥಿತಿಯು ಸಹಜವಾಗಿರದು" ಎಂದು ಅವರು ನುಡಿದರು.ನೌಕಾದಳ, ಸೇನೆ, ವಾಯುದಳಗಳ ಮುಖ್ಯಸ್ಥರಾದ ಅಡ್ಮಿರಲ್ ಸುರೇಶ್ ಮಹ್ತಾ, ಜನರಲ್ ದೀಪಕ್ ಕಪೂರ್ ಮತ್ತು ಏರ್‌ಚೀಫ್ ಮಾರ್ಶಲ್ ಫಾಲಿ ಹೋಮಿ ಮೇಜರ್ ಅವರಗಳೂ ವಿಜಯ್ ದಿವಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. |