ಪಶ್ಚಿಮ ಬಂಗಾಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ರಾಜ್ಯದೊಳಕ್ಕೆ ನೆರೆರಾಜ್ಯದಿಂದ ಕೋಳಿಮಾಂಸದ ಹರಿವಿನ ಮೇಲೆ ಒರಿಸ್ಸಾ ನಿಷೇಧ ಹೇರಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಸೇರಿದಂತೆ ನೆರೆರಾಜ್ಯಾಗಳಿಂದ ಮಾಂಸದ ಕೋಳಿಗಳು ಮತ್ತು ಇತರ ಉತ್ಪನ್ನಗಳನ್ನು ರಾಜ್ಯದೊಳಕ್ಕೆ ತರುವುದರ ಮೇಲೆ ನಾವು ನಿಷೇಧ ಹೇರಿದ್ದೇವೆ ಎಂದು ಮೀನುಗಾರಿಕೆ ಮತ್ತು ಪಶುಸಂಪನ್ಮೂಲ ಅಭಿವೃದ್ಧಿ ಇಲಾಖಾ ನಿರ್ದೇಶಕ ವಿಷ್ಣುಪಾದ ಸೇತಿ ತಿಳಿಸಿದ್ದಾರೆ.
ಸರ್ಕಾರವು ರಾಜ್ಯದ ವಿವಿಧೆಡೆ ಪಕ್ಷಿಗಳ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದು, ಎಲ್ಲವುಗಳ ಫಲಿತಾಂಶಗಳು ಹಕ್ಕಿಜ್ವರ ಸೋಂಕನ್ನು ಹೊಂದಿಲ್ಲ ಎಂದು ಅವರು ತಿಳಿಸಿದರು.
ಗಡಿಪ್ರದೇಶದಲ್ಲಿರುವ ಎಂಟು ಜಿಲ್ಲೆಗಳಲ್ಲಿ ಜಾಗೃತವಾಗಿರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಮಾಲ್ಡಾ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿರುವುದು ರಕ್ತ ಪರೀಕ್ಷೆಯಿಂದ ದೃಢಪಟ್ಟಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ಹೇಳಿತ್ತು. ಅಸ್ಸಾಮಿನಲ್ಲಿಯೂ ಹಕ್ಕಿಜ್ವರ ಕಾಣಿಸಿಕೊಂಡಿದ್ದು ಪಕ್ಷಿಗಳ ವಧಾ ಕಾರ್ಯ ಕೈಗೊಳ್ಳಲಾಗಿದೆ.
|