ಉಗ್ರವಾದಿಗಳ ವಿರುದ್ಧ ಪರಿಣಾಮಕಾರಿ ಹೋರಾಟದ ಹಿನ್ನೆಲೆಯಲ್ಲಿ ಜಾರಿಗೆ ತರಲುದ್ದೇಶಿಸಲಾಗಿರುವ ಕಾಯ್ದೆಯು ಜಾರಿಯಾಗುವ ಮುನ್ನವೇ ಈ ಕುರಿತು ಪ್ರಮುಖ ಪಕ್ಷಗಳ ನಡುವೆ ರಾಜಕೀಯ ಆರಂಭವಾಗಿದೆ.ಉದ್ದೇಶಿತ ಭಯೋತ್ಪಾದನಾ ವಿರೋಧಿ ಕಾನೂನು ಸಂಪೂರ್ಣವಾಗಿಲ್ಲ ಎಂದು ಬಿಜೆಪಿ ಹೇಳಿದೆ. ಪೊಲೀಸರ ಮುಂದೆ ಮಾಡಲಾಗುವ ನಿವೇದನೆಯನ್ನು ಸಾಕ್ಷ್ಯಾಧಾರ ಎಂದು ಪರಿಗಣಿಸುವ ನಿಬಂಧನೆ ಇಲ್ಲದಿರುವುದು ಅಸಂಪೂರ್ಣ ಎಂದು ಬಿಜೆಪಿ ಹೇಳಿದ್ದರೆ, ಈ ನಿಬಂಧನೆಯ ದುರುಪಯೋಗಕ್ಕೆ ಹೆಚ್ಚಿನ ಅವಕಾಶವಿದೆ ಎಂಬುದು ಕಾಂಗ್ರೆಸ್ ವಾದ.ಭಯೋತ್ಪಾದನೆಯ ಕುರಿತು ಕಠಿಣ ನಿಲುವು ತಾಳುವ ಕಾಂಗ್ರೆಸ್‌ನ ಪ್ರಯತ್ನವು ಒತ್ತಾಯಪೂರ್ವಕವಾದುದು ಎಂದು ಬಿಜೆಪಿ ದೂರಿದೆ. ಆದರೆ ಕಾಂಗ್ರೆಸ್ ಪ್ರಕಾರ ಈ ಕಾಯ್ದೆಯು ಎಲ್ಲಾ ವಿಚಾರಗಳನ್ನು ವ್ಯಾಪಿಸಿದೆ.ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಲೇ ಬಂದಿದ್ದ ಬಿಜೆಪಿ, ಯುಪಿಎ ಸರ್ಕಾರ ಉಗ್ರರ ವಿರುದ್ಧ ಮೆದು ಧೋರಣೆ ತಳೆದಿದೆ ಎಂದು ದೂರುತ್ತಲೇ ಬಂದಿದೆ. ಇದೀಗ ಯುಪಿಎ ಸರ್ಕಾರ ಕಠಿಣ ಕಾಯ್ದೆಯನ್ನು ತರಲು ಮುಂದಾಗಿದ್ದು, ಇದರ ಕೀರ್ತಿಯನ್ನು ಯುಪಿಎಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಿರುವಂತಿಲ್ಲ.ಪೋಟಾದಂತೆಯೇ ಹೊಸ ಕಾನೂನಿನಲ್ಲಿಯೂ ಜಾಮೀನು ಪಡೆಯುವುದು ಕಷ್ಟಕರ ವಿಚಾರ. ಬಂಧಿತನ ಬಳಿ ಶಸ್ತಾಸ್ತ್ರ ಮದ್ದುಗುಂಡುಗಳು ಪತ್ತೆಯಾಗಿದ್ದಲ್ಲಿ ಆತನ ಅಮಾಯಕತೆಯನ್ನು ಸಾಬೀತು ಮಾಡುವ ಹೊರೆ ಆತನ ಮೇಲೆಯೇ ಇರುತ್ತದೆ. ಜಾಮೀನು ರಹಿತವಾಗಿ 90 ದಿನಗಳ ಬದಲಿಗೆ 180 ದಿನಗಳಕಾಲ ವಶದಲ್ಲಿರಿಸಿಕೊಳ್ಳುವುದು, 15ದಿನಗಳ ಬದಲಿಗೆ 30 ದಿನಗಳ ಕಾಲದ ಪೊಲೀಸ್ ವಶ ಮತ್ತು ಭಯೋತ್ಪಾದನೆಯಲ್ಲಿ ಒಳಗೊಂಡವರಿಗೆ ಜೀವಾವಧಿ ಶಿಕ್ಷೆ ಮುಂತಾದ ನಿಬಂಧನೆಗಳನ್ನು ಪೋಟಾದಿಂದ ಪಡೆಯಲಾಗಿದೆ. ರಾಷ್ಟ್ರೀಯ ತನಿಖಾ ಮಂಡಳಿಗಾಗಿ ಏನೂ ಮಾಡದ ಬಿಜೆಪಿಯು ಈಗ ಅದಕ್ಕಾಗಿ ಕಾಂಗ್ರೆಸ್ ವಿರುದ್ಧ ಅಸೂಯೆ ಪಡುತ್ತಿದೆ ಎಂದು ಕಾಂಗ್ರೆಸ್ ದೂರುತ್ತಿದೆ.26 /11ರ ದಾಳಿಯ ಬಳಿಕ ಸಂಸತ್ ಅಧಿವೇಶನದಲ್ಲಿ ಒಗ್ಗಟ್ಟು ತೋರಿದ್ದರೂ, ಪಕ್ಷಗಳೊಳಗಿನ ಭಿನ್ನಾಭಿಪ್ರಾಯ ಬಹುತೇಕವಾಗಿ ಸ್ಪಷ್ಟವಾಗುತ್ತಿದ್ದು, ಲೋಕಸಭಾ ಚುನಾವಣೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಇದು ಸ್ಫೋಟಗೊಳ್ಳುವ ಸಾಧ್ಯತೆ ತೋರುತ್ತಿದೆ. |