ಛತ್ತೀಸ್‌ಗಢದ ನಕ್ಸಲ್ ವಿರೋಧಿ ಗುಂಪು ಸಲ್ವ ಜುಡುಮ್‌ಗೆ ಸರ್ಕಾರ ಅಂಗೀಕಾರ ನೀಡಿಲ್ಲ. 'ಸರ್ಕಾರೇತರ' ಕಾರ್ಯಕರ್ತರ ಕೈಗೆ ಕಾನೂನು ಜಾರಿ ಕಾರ್ಯವನ್ನು ವಹಿಸುವ ಒಲವನ್ನು ಸರ್ಕಾರ ಹೊಂದಿಲ್ಲ ಎಂದು ಗೃಹಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡುತ್ತಿದ್ದ ಅವರು ಈ ವಿಚಾರ ತಿಳಿಸಿದ್ದಾರೆ.
ದಾಂತೆವಾಡ ಜಿಲ್ಲೆಯಲ್ಲಿ 2005ರಲ್ಲಿ ನಕ್ಸಲರನ್ನು ತಡೆಯಲು ಸ್ಥಾಪಿಸಲಾಗಿರುವ ಸಲ್ವಾ ಜುಡುಮ್ ಅನ್ನು ವಿಸರ್ಜಿಸುವ ಛತ್ತೀಸ್‌ಗಢ ಸರ್ಕಾರದ ವಿನಂತಿಯನ್ನು ಸರ್ಕಾರ ಪರಿಗಣಿಸುವುದೇ ಎಂದು ಸಿಪಿಐನ ಡಿ ರಾಜಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡುತ್ತಿದ್ದರು.
ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕಾನೂನು ಜಾರಿ ಸರ್ಕಾರದ ಜವಾಬ್ದಾರಿ. ಇದನ್ನು ಇತರರು ಕೈಗೆತ್ತಿಕೊಳ್ಳುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಚಿದಂಬರಂ ನುಡಿದರು.
ಈ ಸಂಘಟನೆಯ ಸಿಂಧುತ್ವದ ಕುರಿತು ಕೇಳಲಾದ ಪ್ರಶ್ನೆಗೆ, ಚಿದಂಬರಂ ಉತ್ತರಿಸಲು ನಿರಾಕರಿಸಿದರು. ಪ್ರಕರಣವು ಸುಪ್ರೀಂ ಕೋರ್ಟಿನಲ್ಲಿರುವ ಕಾರಣ ಅವರು ಈ ಪ್ರಶ್ನೆಗೆ ಉತ್ತರಿಸಿಲ್ಲ. ಸಲ್ವಾ ಜುಡುಮ್‌ಗೆ ರಾಜ್ಯ ಸರ್ಕಾರದ ಬೆಂಬಲವಿತ್ತು. ಆದರೆ, ಇದಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.
ಮಾನವಹಕ್ಕುಗಳ ಕಾರ್ಯಕರ್ತ ಹಾಗೂ ವೈದ್ಯರಾಗಿರುವ ವಿನಾಯಕ್ ಸೇನ್ ಅವರನ್ನು 2007ರಿಂದ ಬಂಧನದಲ್ಲಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ವಿಚಾರ ತನ್ನ ಪರಿಗಣನೆಯಲ್ಲಿರುವುದಾಗಿ ನುಡಿದರು. |