ಮುಂಬೈ ದಾಳಿಯಲ್ಲಿ ಉಗ್ರರ ಗುಂಡೇಟಿನಿಂದ ಹತರಾಗಿರುವ ಪೊಲೀಸಧಿಕಾರಿ ಹೇಮಂತ್ ಕರ್ಕರೆ ಸಾವಿನ ಕುರಿತು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಎ.ಆರ್.ಅಂತುಳೆ ಅವರು ಸಂಶಯ ವ್ಯಕ್ತಪಡಿಸುವ ಮೂಲಕ ಹೊಸವಿವಾದಕ್ಕೆ ನಾಂದಿ ಹಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಕರ್ಕರೆ ಅವರು ಭಯೋತ್ಪಾದನೆಯ ಬಲಿಪಶುವೇ ಎಂಬುದು ತನಗೆ ಸ್ಪಷ್ಟವಾಗಿಲ್ಲ" ಎಂದು ಹೇಳಿದ್ದಾರೆ. ಅಲ್ಲದೆ ಕರ್ಕರೆ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.ಮಾಲೆಗಾಂವ್ ಸ್ಫೋಟ ಪ್ರಕರಣ ತನಿಖೆಯ ನೇತೃತ್ವ ವಹಿಸಿದ್ದ ಕರ್ಕರೆ ಅವರು ತನಿಖೆಯ ನಡೆಯುತ್ತಿರುವ ವೇಳೆಗೆಯೇ, ನವೆಂಬರ್ 26ರಂದು ಉಗ್ರರ ಗುಂಡಿಗೆ ಬಲಿಯಾಗಿದ್ದರು." ಕರ್ಕರೆ ಒಬ್ಬ ನಿರ್ಭಿಡೆಯ ಅಧಿಕಾರಿಯಾಗಿದ್ದರು. ಅವರ ಸಾಹಸ ದೊಡ್ಡದು. ಅವರು ದೂರದೃಷ್ಟಿ ಹೊಂದಿದವರಾಗಿದ್ದು , ರಾಷ್ಟ್ರಕ್ಕಾಗಿ ಪ್ರಾಣತ್ಯಾಗಕ್ಕೆ ಸದಾಸಿದ್ಧರಾಗಿದ್ದರು. ಆದರೆ, ತಾಜ್, ಒಬೆರಾಯ್ ಹೋಟೇಲ್‌ಗಳಲ್ಲದೆ ಅವರು ಏನೂ ಇಲ್ಲದ ಆ ಜಾಗಕ್ಕೆ ಹೇಗೆ ತೆರಳಿದ್ದರು" ಎಂಬುದಾಗಿ ಅಂತುಳೆ ಪ್ರಶ್ನಿಸಿದ್ದಾರೆ." ಅವರು ಸ್ವತಂತ್ರ ತನಿಖೆ ನಡೆಸುತ್ತಿದ್ದರು. ಮತ್ತು ಮುಸ್ಲಿಮೇತರರು ಉಗ್ರವಾದಿಗಳಾಗಿದ್ದಾರೆ ಎಂಬುದನ್ನು ಪತ್ತೆಮಾಡಿದ್ದರು. ಹಾಗಾಗಿ ಅವರು ಭಯೋತ್ಪಾದನೆಯ ಬಲಿಪಶುವೇ ಅಥವಾ ಇನ್ನೇನಾದರೂ ಇದೆಯೇ ಎಂಬುದು ನಂಗೊತ್ತಿಲ್ಲ. ಕರ್ಕರೆ ನನಗೆ ವೈಯಕ್ತಿಕವಾಗಿ ಗೊತ್ತಿತ್ತು ಮತ್ತು ನಾನವರಿಗೆ ಗೌರವ ಸಲ್ಲಿಸುತ್ತೇನೆ. ಅವರ ಸಾವಿನ ಹಿಂದೆ ಕಣ್ಣಿಗೆ ನಿಲುಕದ್ದು ಇದೆ" ಎಂದು ಅಂತುಳೆ ನುಡಿದರು.ಸಾಧ್ವಿ ಪ್ರಗ್ಯಾಸಿಂಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಹಾಗೂ ಇತರ ಹನ್ನೊಂದು ಮಂದಿಯ ಮೇಲೆ ಆರೋಪ ಹೊರಿಸಲಾಗಿರುವ ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ಪ್ರಸ್ತಾಪಿಸಿದ ಅಂತುಳೆ, ಕರ್ಕರೆ ಅವರು ಮುಸ್ಲಿಮರನ್ನೊಳಗೊಂಡ ಪ್ರಕರಣದ ತನಿಖೆಯನ್ನೂ ನಡೆಸುತ್ತಿದ್ದಾರೆ ಎಂದು ಹೇಳಿದರು.ಅಲ್ಲದೆ, ಎಲ್ಲಾ ಮೂರೂ ಅಧಿಕಾರಿಗಳೂ ಒಂದೇ ಕಡೆಗೆ ಏಕೆ ತೆರಳಿದ್ದರು ಎಂಬುದಾಗಿಯೂ ಸಚಿವರು ಪ್ರಶ್ನಿಸಿದ್ದಾರೆ.ಕರ್ಕರೆ, ಎಸಿಪಿ ಅಶೋಕ್ ಕಾಮ್ಟೆ ಮತ್ತು ವಿಜಯ್ ಸಾಲೆಸ್ಕರ್ ಅವರು ಕಾಮಾ ಆಸ್ಪತ್ರೆ ಎದುರುಗಡೆ ಉಗ್ರರ ಗುಂಡಿಗೆ ಎದೆಯೊಡ್ಡಿದ್ದರು. ಮಾಲೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಧ್ವಿ ಪ್ರಗ್ಯಾ ಸಿಂಗ್, ಹಾಗೂ ಇತರ ಹಿಂದೂ ಮುಖಂಡರನ್ನು ಬಂಧಿಸಿರುವ ಕ್ರಮಕ್ಕೆ, ಕರ್ಕರೆ ರಾಜಕೀಯ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು.ಬಿಜೆಪಿ ಪ್ರಶ್ನೆ ಅಂತುಳೆ ಅವರು ಕರ್ಕರೆ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಕುರಿತು ತೀವ್ರ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಇದು ಯುಪಿಎ ಸರ್ಕಾರದ ಸಂಪುಟದ ಅಭಿಪ್ರಾಯವೇ ಇಲ್ಲ ಅಂತುಳೆ ಅವರ ವೈಯಕ್ತಿಕ ಅಭಿಪ್ರಾಯವೇ ಎಂದು ಪ್ರಶ್ನಿಸಿದೆ.ಈ ಹೇಳಿಕೆ ಅಸಹ್ಯಕರ ಎಂದಿರುವ ಬಿಜೆಪಿ ವಕ್ತಾರ ರಾಜೀವ ಪ್ರತಾಪ್ ರೂಢಿ ಪ್ರಧಾನಿ ಮನಮೋಹನ್ ಸಿಂಗ್ ಸ್ಪಷ್ಟೀಕರಣ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. |