ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜನರಿಲ್ಲಿ ಅಭದ್ರರು, ಜನನಾಯಕರು ಸುಭದ್ರರು!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನರಿಲ್ಲಿ ಅಭದ್ರರು, ಜನನಾಯಕರು ಸುಭದ್ರರು!
PTI
ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಬಾಧಿಸತೊಡಗಿದೆ ಎಂಬ ಅಂಶ ಒಂದೆಡೆಯಾದರೆ, ದೇಶದಲ್ಲಿ ಭಯೋತ್ಪಾದನಾ ದಾಳಿಗಳು ಹೆಚ್ಚಾಗಿರುವುದರಿಂದ ಜನ ಸಾಮಾನ್ಯರಿಗೂ ಅಭದ್ರತೆ ಕಾಡುತ್ತಿರುವುದು ಮತ್ತೊಂದೆಡೆ. ಮತ್ತು ಭಯೋತ್ಪಾದನೆ ನಿಗ್ರಹಕ್ಕಿರುವ ತಂಡಗಳ ಬಜೆಟ್‌ಗೆ ಕೊರತೆಯಿದೆ ಎಂಬುದು ತೀರಾ ಕಳವಳಕಾರಿಯಾದ ನಂಬಲೇಬೇಕಾದ ಸತ್ಯ. ಆದರೆ ವಿಐಪಿಗಳ ರಕ್ಷಣೆಗಾಗಿ ಇರುವ ಎಸ್‌ಪಿಜಿ ಬಜೆಟ್ ಮಾತ್ರ ಮೇಲಕ್ಕೇರುತ್ತಲೇ ಇದೆ!

ಲೋಕಸಭೆಯಲ್ಲಿ ಬುಧವಾರ ಚರ್ಚೆ ನಡೆಯುತ್ತಿದ್ದ ಸಂದರ್ಭ ಶೂನ್ಯವೇಳೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಎಲ್‌ಜೆಪಿ ಸದಸ್ಯೆ ರಂಜಿತಾ ರಂಜನ್, ಉತ್ತರ ಪ್ರದೇಶ ಮುಖ್ಯಮಂತ್ರಿಗೆ 750 ಮಂದಿ ಭದ್ರತಾ ಸಿಬ್ಬಂದಿಗಳಿದ್ದರೆ, ಪಂಜಾಬ್ ಮುಖ್ಯಮಂತ್ರಿಗೆ ಈ ಸಂಖ್ಯೆ 1000 ಎಂದು ಗಮನ ಸೆಳೆದರು.

ಸುಮಾರು ಶೇ.30ರಿಂದ 40ರಷ್ಟು ಎನ್‌ಎಸ್‌ಜಿ ಕಮಾಂಡೋಗಳು ರಾಜಕಾರಣಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಹೇಳಿದ ಅವರು, ಜನನಾಯಕನೊಬ್ಬ ಜನ ಸಾಮಾನ್ಯನ ಭದ್ರತೆ ಬಗ್ಗೆ ಚಿಂತಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ರಾಜಕಾರಣಿಗಳು ಹೆಚ್ಚುವರಿ ಭದ್ರತೆಯನ್ನು 'ಪ್ರತಿಷ್ಠೆಯ ಪ್ರಶ್ನೆ' ಎಂದು ಪರಿಗಣಿಸುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು.

ಎಷ್ಟು ಕೋಟಿ?: ಇದು ವಾಸ್ತವ ಸಂಗತಿ. ಪ್ರಧಾನಮಂತ್ರಿ, ಗಾಂಧಿ ಕುಟುಂಬದ ಸದಸ್ಯರು, ಪ್ರತಿಪಕ್ಷ ನಾಯಕ ಮತ್ತು ಇನ್ನೂ ಕೆಲವು ವಿವಿಐಪಿಗಳಿಗೆ ಝಡ್ ಕೆಟಗರಿಯ ಭದ್ರತೆ ಒದಗಿಸಲು ವಾರ್ಷಿಕವಾಗಿ ತೆರಿಗೆದಾರರ 180 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.

ವಿಐಪಿಗಳ ರಕ್ಷಣೆಗೆ ಎಷ್ಟೊಂದು ಮಹತ್ವ ನೀಡಲಾಗುತ್ತಿದೆಯೆಂದರೆ, 60 ಸಾವಿರದಷ್ಟು ಸಂಖ್ಯಾಬಲವಿರುವ ದೆಹಲಿ ಪೊಲೀಸರ ಶೇ.25ರಷ್ಟು ಮಂದಿಯೂ 400ಕ್ಕೂ ಅಧಿಕ ವಿಐಪಿಗಳ ರಕ್ಷಣೆಯಲ್ಲಿ ನಿರತರಾಗಿದ್ದಾರೆ.

ವಾಸ್ತವವಾಗಿ ಹಿಂದಿನ ಸಾಲಿಗಿಂತ 2008-09 ಸಾಲಿನಲ್ಲಿ ರಾಷ್ಟ್ರೀಯ ಭದ್ರತಾ ದಳಕ್ಕೆ (ಎನ್ಎಸ್‌ಜಿ) ಮೀಸಲಾಗಿದ್ದ ಬಜೆಟನ್ನು ವಾರ್ಷಿಕ 159 ಕೋಟಿ ರೂ.ಗಳಿಂದ 158 ಕೋಟಿ ರೂ.ಗೆ ಇಳಿಸಲಾಗಿತ್ತು. ಆದರೆ, ವಿಐಪಿಗಳ ರಕ್ಷಣೆಗಾಗಿ ಇರುವ ವಿಶೇಷ ರಕ್ಷಣಾ ದಳಕ್ಕೆ (ಎಸ್‌ಪಿಜಿ) ಮೀಸಲಾಗಿರುವ ಬಜೆಟನ್ನು 117 ಕೋಟಿ ರೂ.ಗಳಿಂದ 180 ಕೋಟಿ ರೂ.ಗಳಿಗೆ ಏರಿಸಲಾಗಿತ್ತು!

ಒಂದು ಅಂದಾಜಿನ ಪ್ರಕಾರ, ಇವರಲ್ಲಿ ಶೇ.30ರಷ್ಟು ಮಂದಿಗೆ ಈ ಭದ್ರತೆಯೇ ಬೇಕಾಗಿಲ್ಲ ಮತ್ತು ಶೇ.50ರಷ್ಟು ಮಂದಿಗೆ ಕೆಳ ಮಟ್ಟದ ಭದ್ರತೆ ಒದಗಿಸಿದರೂ ಸಾಕಾಗುತ್ತದೆ.

ಇದೀಗ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಕೇಂದ್ರದ ಹೊಸ ಗೃಹ ಸಚಿವ ಪಿ.ಚಿದಂಬರಂ ಅವರು, ಝಡ್ ಕೆಟಗರಿ ಭದ್ರತೆಯನ್ನು ನಿರಾಕರಿಸಿರಬಹುದು, ಆದರೆ ಅವರಿಗಿಂತ ಮೊದಲಿದ್ದ ಶಿವರಾಜ್ ಪಾಟೀಲ್ ಅವರು ಈ ಮಟ್ಟದ ಭದ್ರತೆಯನ್ನು ಪಡೆಯುತ್ತಿದ್ದರು.

ವಿವಿಐಪಿ ಭದ್ರತೆ ನಿರಾಕರಿಸಿದ್ದ ಪ್ರಮುಖರಲ್ಲಿ, ಎಡರಂಗದ ಮುಖಂಡರಾದ ಪ್ರಕಾಶ್ ಕರಾಟ್, ಸೀತಾರಾಮ ಯಚೂರಿ ಮತ್ತು ಎ.ಬಿ.ಬರ್ಧಾನ್ ಪ್ರಮುಖರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೆಹಲಿ ಮುಖ್ಯಮಂತ್ರಿಯಾಗಿ ಶೀಲಾ ಪ್ರಮಾಣ ವಚನ ಸ್ವೀಕಾರ
ಟಾಟಾರಿಂದ ಸ್ವಯಂ ಉಗ್ರ ನಿಗ್ರಹ ಪಡೆ?
ಕರ್ಕರೆ ಸಾವಿನ ಹಿಂದೆ ಸಂಚು: ಸಚಿವ ಅಂತುಳೆ ಸಿಡಿಸಿದ ಬಾಂಬ್
ಪಾಕ್‌ ಜತೆ ಶಾಂತಿ ಪ್ರಕ್ರಿಯೆ ಮುಂದುವರಿಕೆ ಕಷ್ಟ
ಸಲ್ವಾ ಜುಡುಮ್‌ ಅಂಗೀಕಾರಕ್ಕೆ ಸರ್ಕಾರದ ನಕಾರ
ಉಗ್ರನಿಗ್ರಹ ಬಿಲ್: ಬಿಜೆಪಿ-ಕಾಂಗ್ರೆಸ್ ರಾಜಕೀಯ