ಮುಂಬೈ ದಾಳಿಯ ವೇಳೆಗೆ ಉಗ್ರರ ಗುಂಡಿಗೆ ಬಲಿಯಾಗಿರುವ ಹೇಮಂತ್ ಕರ್ಕರೆ ಕುರಿತ ಬೇಜವಾಬ್ದಾರಿ ಹೇಳಿಕೆ ನೀಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಎ.ಆರ್.ಅಂತುಳೆ ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ವಿವರಿಸಲು ಕಾಂಗ್ರೆಸ್ ತಾಕೀತು ಮಾಡಿದೆ.ಅಂತುಳೆ ಹೇಳಿಕೆಯಿಂದ ಮುಕ್ತವಾಗಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್, ಈ ಹೇಳಿಕೆಯು ಅಂತುಳೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಇದು ಕಾಂಗ್ರೆಸ್ ಇಲ್ಲವೇ, ಸರ್ಕಾರದ ಅಭಿಪ್ರಾಯವಲ್ಲ ಎಂದು ಹೇಳಿದೆ.ಅದಾಗ್ಯೂ, ಅಂತುಳೆ ಒಬ್ಬ ಹಿರಿಯ ಕಾಂಗ್ರೆಸ್ ನಾಯಕರಾಗಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಅಂತುಳೆ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಒಲವು ವ್ಯಕ್ತಪಡಿಸಿದ್ದಾರೆ.ಸಂಸತ್‌ಭವನದ ಹೊರಗಡೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅಂತುಳೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಸಾವಿನ ಬಗ್ಗೆ ತನಗೆ ಸಂಶಯಗಳಿವೆ ಎಂದು ಹೇಳಿದ್ದು, ಈ ಕುರಿತು ಪ್ರತ್ಯೇಕ ತನಿಖೆಯಾಗಬೇಕು ಎಂದು ಹೇಳಿದ್ದರು.ಅತ್ಯಂತ ಸೂಕ್ಷ್ಮ ವಿಚಾರದ ಕುರಿತು ಅಂತುಳೆಯ ಇಂತಹ ವಿಭಜಕ ಹೇಳಿಕೆಯು ರಾಷ್ಟ್ರಾದ್ಯಂತ ಸಂಚಲನೆ ಮೂಡಿಸಿತ್ತು. ಅಲ್ಲದೆ ಪ್ರಮುಖ ವಿರೋಧ ಪಕ್ಷ ಬಿಜೆಪಿಯು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಈ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿತ್ತು." ಕರ್ಕರೆ ಅವರು ಮುಸ್ಲಿಮೇತರರು ಒಳಗೊಂಡಿರುವ ಪ್ರಕರಣವನ್ನೂ ತನಿಖೆ ಮಾಡುತ್ತಿದ್ದರು. ಕರ್ಕರೆ ಸಾವಿನಲ್ಲಿ ಕಣ್ಣಿಗೆ ಕಾರಣದಂತಹುದು ಇನ್ನೇನೋ ಇದೆ" ಎಂಬ ಅತ್ಯಂತ ಬೇಜವಾಬ್ದಾರಿಯ ಹೇಳಿಕೆಯನ್ನು ಅಂತುಳೆ ನೀಡಿದ್ದರು.ಭಯೋತ್ಪಾದಕರಿಗೆ ಕರ್ಕರೆ ಅವರನ್ನು ಕೊಲ್ಲಲು ಯಾವ ಕಾರಣಗಳೂ ಇರಲಿಲ್ಲ. ಕರ್ಕರೆ ಅವರು ನಿಜವಾಗಿಯೂ ಭಯೋತ್ಪಾದನೆಯ ಬಲಿಪಶುವೇ ಇಲ್ಲ ಭಯೋತ್ಪಾದನೆ ಮತ್ತು ಇನ್ನೇನಾದರೂ ಇದೆಯಾ ಎಂಬುದಾಗಿ ಪ್ರಶ್ನಿಸಿದ್ದರು.ಅಂತುಳೆ ಹೇಳಿಕೆಗೆ ಬುಧವಾರವೇ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ವಕ್ತಾರ ಅಭಿಶೇಕ್ ಮಾನು ಸಿಂಘ್ವಿ ಅವರು, ಪಕ್ಷಕ್ಕೂ ಈ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ, ಅದು ಅಂತುಳೆಯವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದು, ಇಂತಹ ಸೂತ್ರಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. |