ನರೇಂದ್ರ ರಾಠೋಡ್ ಮುಂಬಯಿ ಮೇಲೆ ನಡೆದ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಜೀವಂತ ಸೆರೆ ಸಿಕ್ಕಿರುವ ಪಾಕಿಸ್ತಾನಿ ಉಗ್ರಗಾಮಿ ಮೊಹಮದ್ ಅಜ್ಮಲ್ ಕಸಬ್ ಗುರುವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.ಮೂಲಗಳ ಪ್ರಕಾರ, ಜೈಲಿನೊಳಗೆ ಬೇರಾವುದೇ ವಸ್ತು ಸಿಗದ ಕಾರಣ ಕಸಬ್ ತನ್ನ ಮೈಯಲ್ಲಿರುವ ಗಾಯಗಳಿಗೆ ಕಟ್ಟಲಾದ ಬ್ಯಾಂಡೇಜನ್ನೇ ಬಿಚ್ಚಿ, ಅದನ್ನು ಕುತ್ತಿಗೆಗೆ ಬಿಗಿದುಕೊಂಡು ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ. ಮುಂಬಯಿ ದಾಳಿ ವೇಳೆ ಭದ್ರತಾ ಪಡೆಗಳೊಂದಿಗಿನ ಹೋರಾಟದ ಸಂದರ್ಭ ಕಸಬ್ ಮೈಮೇಲೆ ಹಲವಾರು ಗುಂಡಿನ ಗಾಯಗಳಾಗಿದ್ದವು.ಅಜ್ಮಲ್ ತನ್ನ ಮತ್ತೊಬ್ಬ ಸಹಚರ ಅಬು ಇಕ್ಬಾಲ್ ಜೊತೆಗೂಡಿ ಮುಂಬಯಿಯ ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್‌ಟಿ) ಬಳಿ ಗುಂಡಿನ ಸುರಿಮಳೆಗೈಯುತ್ತಾ, ಹಲವರನ್ನು ಕೊಂದ ಬಳಿಕ, ಗಿರ್ಗಾಂವ್ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಇಕ್ಬಾಲ್ ಸಾವನ್ನಪ್ಪಿದ್ದರೆ, ಈತ ಗಾಯಗೊಂಡು ಜೀವಂತವಾಗಿ ಸೆರೆಸಿಕ್ಕಿದ್ದ.ಮುಂಬಯಿ ಎಟಿಎಸ್‌ನ ಮೂವರು ಹಿರಿಯ ಅಧಿಕಾರಿಗಳಾದ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್‌ಕೌಂಟರ್ ಚತುರ ವಿಜಯ ಸಾಲಸ್ಕರ್ ಮತ್ತು ಅಶೋಕ್ ಕಾಮ್ಟೆ ಎಂಬವರ ಹತ್ಯೆಯ ಆರೋಪವು ಕಸಬ್ ಮತ್ತು ಇಕ್ಬಾಲ್ ಮೇಲಿದೆ.ಮುಂಬಯಿ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರಗಾಮಿಗಳಲ್ಲಿ 9 ಮಂದಿಯನ್ನು ಭಾರತದ ಸುರಕ್ಷಾ ಪಡೆಗಳು ಹತ್ಯೆ ಮಾಡಿದ್ದವು. ದೇಶದ ಹೆಚ್ಚಿನ ವಕೀಲರು ಕಸಬ್ ಪರವಾಗಿ ವಾದಿಸಲು ನಿರಾಕರಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.ಕಸಬ್‌ನನ್ನು ಕ್ರೈಮ್ ಬ್ರಾಂಚ್‌ನ ಒಂದು ವಿಶೇಷ ಲಾಕಪ್‌ನಲ್ಲಿ ಭಾರೀ ಭದ್ರತೆಯ ನಡುವೆ ಇರಿಸಲಾಗಿದೆ. ಮುಂಬಯಿ ದಾಳಿಗೆ ಸಂಬಂಧಿಸಿದಂತೆ ಪೊಲೀಸರ ಬಳಿ ಇರುವ ಏಕೈಕ ಸಾಕ್ಷ್ಯವೆಂದರೆ ಕಸಬ್. ಇದು ಅಂತಾರಾಷ್ಟ್ರೀಯ ವಿಷಯವೂ ಆಗಿರುವುದರಿಂದ ಆತ ಭಾರತಕ್ಕೆ ಬಹುಮೂಲ್ಯ ಆಸ್ತಿ. ಲಾಕಪ್‌ನಲ್ಲಿ ಆತ ತನ್ನನ್ನು ಕೊಂದುಬಿಡಿ ಎಂದು ಅಲ್ಲಿರುವ ಪೊಲೀಸ್ ಅಧಿಕಾರಿಗಳನ್ನೆಲ್ಲಾ ಗೋಗರೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. |