ನ್ಯಾಯೋಚಿತ ವಿಚಾರಣೆಗಾಗಿ ಅಜ್ಮಲ್ ಅಮೀರ್ ಕಸಬ್‌ಗೆ ತನ್ನನ್ನು ಸಮರ್ಥಿಸಿಕೊಳ್ಳಲು ವಕೀಲರನ್ನು ನೇಮಿಸಿಕೊಳ್ಳುವ ಅವಕಾಶ ಲಭಿಸಬೇಕು ಎಂದು ಭಾರತೀಯ ಮುಖ್ಯ ನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಹೇಳಿದ್ದಾರೆ.
"ಆತನಿಗೆ ತನ್ನ ಸಮರ್ಥನೆಗೆ ಅವಕಾಶ ಸಿಗಬಾರದು ಎಂದು ತನಗನಿಸುವುದಿಲ್ಲ. ಸೂಕ್ತ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಸಹಾಯ ಒದಗಿಸಲು ವಕೀಲರ ಅವಶ್ಯಕತೆ ಇದೆ. ಉಚಿತವಾದ ವಿಚಾರಣೆಯಿಂದ ಆತ ವಹಿಸಿರುವ ಪಾತ್ರ ಬೆಳಕಿಗೆ ಬರುತ್ತದೆ" ಎಂದು ಅವರು ಖಾಸಗಿ ವಾರ್ತಾ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಮುಂಬೈಯಲ್ಲಿ ಹಿಂದೆಂದೂ ಕಾಣದಂತೆ ದಾಳಿ ನಡೆಸಿರುವ ಉಗ್ರರಲ್ಲಿ ಬದುಕುಳಿದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಾದಿಸಲು ಹಲವಾರು ವಕೀಲ ಮಂಡಳಿಗಳು ನಿರಾಕರಿಸಿವೆ. ಅಲ್ಲದೆ, ಮಹಾರಾಷ್ಟ್ರದ ವಿರೋಧ ಪಕ್ಷವಾಗಿರುವ ಶಿವಸೇನೆಯು ಅಜ್ಮಲ್ ವಿರುದ್ಧ ವಕೀಲಿಕೆ ನಡೆಸದಂತೆ ವಕೀಲರಿಗೆ ಬೆದರಿಕೆ ಹಾಕಿದೆ.
ಕಠಿಣವಾದ ಭಯೋತ್ಪಾದನಾ ವಿರೋಧಿ ಕಾನೂನಿಗೆ ಮುಖ್ಯನ್ಯಾಯಮೂರ್ತಿಯವರು ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಅದು ಮಾನವ ಹಕ್ಕುಗಳನ್ನು ರಕ್ಷಿಸುವಂತಿರಬೇಕು ಎಂದೂ ಹೇಳಿದ್ದಾರೆ.
"ಕಟ್ಟುನಿಟ್ಟಿನ ಕಾಯ್ದೆಯು ಉತ್ತಮ. ಆದರೆ ಕಾನೂನು ಹೇಗಿರಬೇಕು ಎಂಬುದನ್ನು ಸಂಸತ್ತು ಚರ್ಚಿಸಿ ನಿಯೋಜಿಸಬೇಕು. ಈ ರಾಷ್ಟ್ರದ ಜನತೆಗೆ ಇಲ್ಲಿ ಕ್ಷೇಮವಾಗಿ ಬದುಕಬಹುದು ಎಂಬ ಭಾವನೆ ಬರುವಂತಾಗಬೇಕು" ಎಂದವರು ಮಾರ್ಮಿಕವಾಗಿ ಹೇಳಿದ್ದಾರೆ. |