ಮುಂಬೈದಾಳಿಗೆ ಸಹಾಯ ಒದಗಿಸಿದ್ದಾರೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಿಂದ ಮುಂಬೈಗೆ ಕರೆತರಲಾಗಿರುವ ಇಬ್ಬರು ಶಂಕಿತ ಲಷ್ಕರೆ-ಇ-ತೋಯ್ಬಾ ಉಗ್ರರಾದ ಫಾಹೀಮ್ ಅನ್ಸಾರಿ ಮತ್ತು ಸಬಾವುದ್ದೀನ್ ಅವರನ್ನು ಇಲ್ಲಿನ ಮ್ಯಾಜೆಸ್ಟ್ರೀಟ್ ನ್ಯಾಯಾಲಯ ಒಂದು ಡಿಸೆಂಬರ್ 31ರ ತನಕ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಉತ್ತರ ಪ್ರದೇಶದ ಸಿಆರ್‌ಪಿಎಫ್ ಶಿಬಿರದ ಮೇಲೆ ಕಳೆದ ವರ್ಷ ಡಿಸೆಂಬರ್ 31ರಂದು ನಡೆಸಿರುವ ದಾಳಿಯಲ್ಲಿ ಪಾಲ್ಗೊಂಡಿದ್ದಾರೆಂಬ ಆರೋಪದಲ್ಲಿ ಉತ್ತರಪ್ರದೇಶ ವಿಶೇಷ ಕಾರ್ಯಪಡೆಯು ಅನ್ಸಾರಿ ಮತ್ತು ಸಬಾವುದ್ದೀನ್‌ನನ್ನು ಬಂಧಿಸಿತ್ತು.
ಈ ಇಬ್ಬರನ್ನು ಇಲ್ಲಿನ ಮ್ಯಾಜೆಸ್ಟ್ರೀಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಆತನನ್ನು ತಮ್ಮ ವಶಕ್ಕೆ ನೀಡಬೇಕು ಎಂಬ ವಿನಂತಿಯಂತೆ ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಇಬ್ಬರು ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಅಜ್ಮಲ್ ಅಮೀರ್ ಕಸಬ್‌ಗೆ ಸಹಾಯ ಒದಗಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಈ ಉಗ್ರರನ್ನು ವಶಕ್ಕೆ ನೀಡಬೇಕೆಂದು ಪೊಲೀಸರು ನ್ಯಾಯಾಲಯವನ್ನು ವಿನಂತಿಸಿದ್ದಾರೆ.
ಮುಂಬೈಯಲ್ಲಿ ನವೆಂಬರ್ 26ರಂದು ನಡೆಸಲಾಗಿರುವ ದಾಳಿಯಲ್ಲಿ ಬದುಕುಳಿದಿರುವ ಏಕೈಕ ಉಗ್ರ ಅಜ್ಮಲ್ ಇದೀಗ ಪೊಲೀಸರ ವಶದಲ್ಲಿದ್ದಾನೆ. ಇವರು ಗಡಿಯಾಚೆಗೆ ಕಾರ್ಯಾಚರಿಸುವ ಲಷ್ಕರೆ-ಇ-ತೋಯ್ಬಾಗೆ ಮುಂಬೈ ಸ್ಥಳಗಳ ಕುರಿತು ಮಾಹಿತಿ ನೀಡಿರಬಹುದು ಎಂಬುದಾಗಿ ಸಂಶಯಿಸಲಾಗಿದೆ. |