ಉಗ್ರರು ನಡೆಸಿದ ಮುಂಬೈದಾಳಿಯನ್ನು ದೃಶ್ಯಮಾಧ್ಯಮಗಳು ಪೈಪೋಟಿಗೆ ಬಿದ್ದು ಬಿತ್ತರಿಸಿದ ಪರಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಸಾರಕರ ಮಂಡಳಿಯು ಸ್ವಯಂ ನಿಯಂತ್ರಣ ಮಾರ್ಗಸೂಚಿಗಳನ್ನು ನೀಡಿದೆ.ಭದ್ರತಾ ಕಾರ್ಯಾಚರಣೆ ಮತ್ತು ಭಯೋತ್ಪಾದಕರಿಗೆ ಪ್ರಚಾರ ನೀಡುವಂತಹ ದೃಶ್ಯಗಳ ನೇರ ಪ್ರಸಾರ ಮಾಡದಂತೆ ಮಂಡಳಿಯ ಮಾರ್ಗಸೂಚಿಯು ಒತ್ತಾಯಿಸಿದೆ. ಸುದ್ದಿ ಪ್ರಸಾರಕರ ಸಂಘಟನೆ(ಎನ್‌ಬಿಎ)ಯ 'ಸ್ವಯಂ ನಿಯಂತ್ರಣ' ಮಾರ್ಗದರ್ಶಿಸೂಚಿಗಳು ಒತ್ತೆಯಾಳುಗಳ ಪರಿಸ್ಥಿತಿಯ ಮತ್ತು ರಕ್ಷಣಾ ಕಾರ್ಯಾಚರಣೆಯ ಮಾಹಿತಿಗಳನ್ನು ಬಿತ್ತರಿಸಬಾರದು ಎಂದು ಹೇಳಿದೆ.ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬಲಿಪಶುಗಳು ಮತ್ತು ಭದ್ರತಾ ಸಿಬ್ಬಂದಿಗಳೊಂದಿಗೆ ಮಾಧ್ಯಮಗಳು ನೇರಸಂಪರ್ಕ ಸಾಧಿಸುವುದನ್ನೂ ಮಾಡಬಾರದು ಎಂದು ಹೇಳಿರುವ ಮಾರ್ಗಸೂಚಿಯು, ಭಯೋತ್ಪಾದಕರಿಗೆ ಪ್ರಚಾರ ನೀಡುವಂತಹ ದೃಶ್ಯಗಳ ನೇರಪ್ರಸಾರ ಮಾಡಬಾರದು ಎಂದು ಅಭಿಪ್ರಾಯಿಸಿದೆ.ಸಶಸ್ತ್ರ ಬಿಕ್ಕಟ್ಟಿನಂತಹ ಸಂದರ್ಭಗಳಿಗೆ ಸಂಬಂಧಿಸಿದಂತಹ ಮತ್ತು ಕೋಮು ಹಿಂಸಾಚಾರದಂತಹ ವರದಿಗಳನ್ನು ಮಾಡುವ ವೇಳೆಗೆ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ.ಒತ್ತೆಯಾಳುಗಳಾಗಿ ಇರಿಸಿಕೊಂಡಿರುವಂತಹ ಪರಿಸ್ಥಿತಿಗಳಲ್ಲಿ, ಒತ್ತೆಯಾಳುಗಳ ಗುರುತು ಇಲ್ಲವೇ ಸಂಖ್ಯೆಗಳನ್ನು ಪ್ರಸಾರ ಮಾಡಬಾರದು ಎಂದೂ ಅದು ಹೇಳಿದೆ. ಇದಲ್ಲದೆ, ವೀಕ್ಷರ ಮನಸ್ಸನ್ನು ಕ್ಷೋಭೆಗೊಳಿಸುವಂತಹ ಹಳೆಯ ದೃಶ್ಯಗಳನ್ನು ಅನಗತ್ಯವಾಗಿ ಮತ್ತೆಮತ್ತೆ ಪ್ರಸಾರ ಮಾಡಬಾರದು ಎಂದೂ ಹೇಳಿದೆ.ಇಂತಹ ಘಟನೆಗಳನ್ನು ಪ್ರಸಾರ ಮಾಡುವ ವೇಳೆಗೆ ಸಾವನ್ನಪ್ಪಿರುವವರ ಘನತೆಯನ್ನೂ ಮನದಲ್ಲಿರಿಸಿಕೊಳ್ಳಬೇಕು ಎಂದೂ ಮಂಡಳಿ ಹೇಳಿದೆ. ಈ ಮಾರ್ಗಸೂಚಿಗಳ ಕರಡು ತಯಾರಿಸಿರುವ ಸಮಿತಿಯ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಅವರು ಈ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಾ, ಸ್ವಯಂ ನಿಯಂತ್ರಣವು ಎಲ್ಲಕ್ಕಿಂತಲೂ ಅತಿಹೆಚ್ಚು ಪರಿಣಾಮಕಾರಿ ಎಂದು ನುಡಿದರು.ಸ್ವಯಂ ನಿಯಂತ್ರಣ ನಿರ್ದೇಶನದಲ್ಲಿ ಈ ಮಾರ್ಗ ಸೂಚಿಗಳು 'ಪ್ರಥಮ ಪ್ರಮುಖ ಕ್ರಮ'ವಾಗಿದೆ ಎಂದು ವರ್ಮಾ ನುಡಿದರು. |