ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ| ಫಾರೂಕ್ ಅಬ್ದುಲ್ಲಾ ಅವರೊಬ್ಬ ಕೋಟ್ಯಾಧಿಪತಿ. ಆದರೆ ಅವರ ಬಳಿ ಇರುವುದು ಬರಿಯ ಒಂದು ಲಕ್ಷರೂಪಾಯಿ ನಗದು.
ಇವರಿಗೆ ಯಾವುದೇ ಬ್ಯಾಂಕಿನ ಸಾಲ ಇಲ್ಲ. ಯಾವುದೇ ವಿದ್ಯುತ್, ದೂರವಾಣಿ ಇಲ್ಲವೇ ನೀರಿನ ಬಿಲ್ಲುಗಳನ್ನು ಬಾಕಿ ಇರಿಸಿಕೊಂಡಿಲ್ಲ ಎಂಬುದಾಗಿ ಡಿಸೆಂಬರ್ 24ರಂದು ನಡೆಯಲಿರುವ ಚುನಾವಣೆಗೆ ಹಜ್ರತ್‌ಬಲ್ ಮತ್ತು ಸೋನಾವರ್ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿರುವ ಅಬ್ದುಲ್ಲಾ ಅವರು ಜಿಲ್ಲಾ ಚುನಾವಣಾ ಕಚೇರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಇದಲ್ಲದೆ ಸರ್ಕಾರ ಇಲ್ಲವೇ ಯಾವುದೇ ಇತರ ಏಜೆನ್ಸಿಗಳಿಗೆ ಅವರು ಯಾವುದೇ ತೆರಿಗೆಯನ್ನೂ ಬಾಕಿ ಇರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಅವರ ಬಳಿ ಬರಿಯ ಒಂದು ಲಕ್ಷರೂಪಾಯಿ ನಗದು ಇದೆ ಮತ್ತು ಲಂಡನ್‌ನಲ್ಲಿರುವ ಅವರ ಪತ್ನಿ ಬಳಿ 50 ಸಾವಿರ ರೂಪಾಯಿ ನಗದು ಇದೆಯಂತೆ.
ಜಮ್ಮು ಕಾಶ್ಮೀರ ಬ್ಯಾಂಕಿನಲ್ಲಿ 1,97,436.60, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7,66,948 ರೂಪಾಯಿ ಇದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಅವರು 4,26,755 ರೂಪಾಯಿಗಳಿಗೆ ರಿಲಯನ್ಸ್ ಶೇರುಗಳನ್ನು ಖರೀದಿ ಮಾಡಿರುವುದಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳ ಬಳಿ ವೆಟಾರ ಮತ್ತು ಸ್ಕಾರ್ಪಿಯೋ ಎರಡು ವಾಹನಗಳಿವೆ. ಏಪ್ರಿಲ್ 1990ರಿಂದ ಅವರ ಪತ್ನಿ ಲಂಡನ್‌ನಲ್ಲಿ ವಾಸಿಸುತ್ತಿರುವ ಕಾರಣ ಪತ್ನಿಯ ಬಳಿ ಇರುವ ಚಿನ್ನಾಭರಣಗಳ ಕುರಿತು ಅವರಿಗೆ ಮಾಹಿತಿ ಇಲ್ಲವಂತೆ.
ಒಂಭತ್ತು ಕೋಟಿಗಿಂತಲೂ ಅಧಿಕ ಮೊತ್ತದ ಭೂಮಿ, ಮನೆಗಳು ಹಾಗೂ ಇತರ ಆಸ್ತಿಗಳು ಇವೆ ಎಂದು ಅವರು ತಿಳಿಸಿದ್ದಾರೆ.
|