ಮುಂಬೈಯಲ್ಲಿ ಉಗ್ರರ ಗುಂಡಿಗೆ ಬಲಿಯಾದ ಹೇಮಂತ್ ಕರ್ಕರೆ ಸಾವಿನ ಕುರಿತು ಅತ್ಯಂತ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಎ.ಆರ್.ಅಂತುಳೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಬುಧವಾರದಂದು ಸಂಸತ್ ಭವನದ ಹೊರಗಡೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು "ಕರ್ಕರೆ ಅವರು ಮುಸ್ಲಿಮೇತರರು ಒಳಗೊಂಡಿರುವ ಪ್ರಕರಣವನ್ನೂ ತನಿಖೆ ಮಾಡುತ್ತಿದ್ದರು. ಕರ್ಕರೆ ಸಾವಿನಲ್ಲಿ ಕಣ್ಣಿಗೆ ಕಾರಣದಂತಹುದು ಇನ್ನೇನೋ ಇದೆ" ಎಂಬ ಅತ್ಯಂತ ಬೇಜವಾಬ್ದಾರಿಯ ಹೇಳಿಕೆಯನ್ನು ನೀಡಿದ್ದರು.ಅಂತುಳೆ ಅವರು ಇದೀಗ ತನ್ನ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಗುರವಾರ ರಾತ್ರಿ ಪ್ರಧಾನಿಯವರಿಗೆ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.ಅಲ್ಪಸಂಖ್ಯಾತ ಸಚಿವ ಅಂತುಳೆ ಹೇಳಿಕೆ ಕುರಿತು ಸರ್ಕಾರ ಹೇಳಿಕೆ ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಗುರುವಾರ ಹೇಳಿದ್ದರು.ಅತ್ಯಂತ ಸೂಕ್ಷ್ಮ ವಿಚಾರದ ಕುರಿತು ಅಂತುಳೆಯ ಇಂತಹ ವಿಭಜಕ ಹೇಳಿಕೆಯು ರಾಷ್ಟ್ರಾದ್ಯಂತ ಸಂಚಲನೆ ಮೂಡಿಸಿತ್ತು. ಅಲ್ಲದೆ ಪ್ರಮುಖ ವಿರೋಧ ಪಕ್ಷ ಬಿಜೆಪಿಯು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಈ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿತ್ತು.ಭಯೋತ್ಪಾದಕರಿಗೆ ಕರ್ಕರೆ ಅವರನ್ನು ಕೊಲ್ಲಲು ಯಾವ ಕಾರಣಗಳೂ ಇರಲಿಲ್ಲ. ಕರ್ಕರೆ ಅವರು ನಿಜವಾಗಿಯೂ ಭಯೋತ್ಪಾದನೆಯ ಬಲಿಪಶುವೇ ಇಲ್ಲ ಭಯೋತ್ಪಾದನೆ ಮತ್ತು ಇನ್ನೇನಾದರೂ ಇದೆಯಾ ಎಂಬುದಾಗಿ ಪ್ರಶ್ನಿಸಿದ್ದರು.ಅಂತುಳೆ ಹೇಳಿಕೆಗೆ ಬುಧವಾರವೇ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ವಕ್ತಾರ ಅಭಿಶೇಕ್ ಮಾನು ಸಿಂಘ್ವಿ ಅವರು, ಪಕ್ಷಕ್ಕೂ ಈ ಹೇಳಿಕೆಗೂ ಯಾವುದೇ ಸಂಬಂಧ ಇಲ್ಲ, ಅದು ಅಂತುಳೆಯವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದು, ಇಂತಹ ಸೂತ್ರಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.ಅಂತುಳೆ ಪ್ರತಿಕ್ರಿಯೆ ಆದರೆ ಈ ಕುರಿತು ಪ್ರತಿಕ್ರಿಯೆಗಾಗಿ ಪತ್ರಕರ್ತರು ಅಂತುಳೆಯವರನ್ನು ಸಂಪರ್ಕಿಸಿದಾಗ ಅವರು "ತಾನಿದನ್ನು ದೃಢೀಕರಿಸುವುದೂ ಇಲ್ಲ, ಅಲ್ಲಗಳೆಯುವುದೂ ಇಲ್ಲ" ಎಂದಿದ್ದಾರೆ. |