ಮುಂಬೈಯಲ್ಲಿ ಉಗ್ರರೊಂದಿ ಹೋರಾಡುವ ವೇಳೆ ಗಾಯಗೊಂಡ ಕಮಾಂಡೋಗೆ ಈಗ ತನ್ನ ಭಾವಿಪತ್ನಿ ವೈದ್ಯೆಯ ಸಾಂತ್ವಾನ, ಪ್ರೀತಿಯ ಸ್ಪರ್ಷ. ಇದರಿಂದಲೇ ಈ ಯುವ ಕಮಾಂಡೋನ ಅರ್ಧ ನೋವು ಗುಣವಾದಂತೆ!
ಈ ಇಬ್ಬರೂ ತಮ್ಮ ವೃತ್ತಿಗಳಲ್ಲಿ ನಿರತರಾಗಿದ್ದ ಕಾರಣ ಪರಸ್ಪರರಿಗೆ ಭೇಟಿಯಾಗಲೂ ವೇಳೆಯೇ ಲಭಿಸುತ್ತಿರಲಿಲ್ಲ. ಆದರೆ, ಇದೀಗ ಚೆನ್ನೈ ಆಸ್ಪತ್ರೆಯಲ್ಲಿ ಜತೆಗಿದ್ದಾರೆ. ಉಗ್ರರೊಂದಿಗೆ ಕಾದಾಡುವ ವೇಳೆ ತನ್ನ ಒಂದು ಕಣ್ಣಿನ ದೃಷ್ಟಿಯನ್ನು ಕಳಕೊಂಡಿರುವ ಕಮಾಂಡೋಗೆ ತನ್ನ ಭಾವೀ ಪತ್ನಿಯ ಪ್ರೀತಿಯ ಸಿಂಚನದೊಂದಿಗೆ, ಭಾವನಾತ್ಮಕ ಬೆಂಬಲದ ಆಸರೆಯೂ ದೊರೆಯುತ್ತಿದೆ.
ಎನ್‌ಎಸ್‌ಜಿಯ 51 ವಿಶೇಷ ಕ್ರಿಯಾಪಡೆ(ಎಸ್ಎಜಿ)ಯ ಸಮರ್ಥ ಕಮಾಂಡೋ ಆಗಿರುವ ಕ್ಯಾಪ್ಟನ್ ಎ.ಕೆ.ಸಿಂಗ್ ಮುಂಬೈನ ಒಬೆರಾಯ್(ಟ್ರೈಡೆಂಟ್) ಹೋಟೇಲಿನಲ್ಲಿ ಉಗ್ರರೊಂದಿಗೆ ಹೊರಾಡುವ ವೇಳೆಗೆ ಅವರ ಎಡಗಣ್ಣಿಗೆ ಗಾಯವಾಗಿತ್ತು. ಅವರೀಗ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಳಿಯಲ್ಲಿ ಅವರ ಭಾವೀಪತ್ನಿ ಡಾ| ಮಧು ಸಿಂಗ್ ಇದ್ದಾರೆ.
ನಾವು ವೃತ್ತಿನಿರತರಾಗಿದ್ದಾಗ, ಜತೆಗಿರಲು ಸಮಯವೇ ಸಿಗುತ್ತಿರಲಿಲ್ಲ. ಈಗ ಹೆಚ್ಚು ಸಮಯ ಜತೆಯಲ್ಲಿ ಕಳೆಯುವಂತಾಗಿದೆ ಎಂದು ಮಧು ಹೇಳುತ್ತಾರೆ. ಲಕ್ನೋದಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಮಧು ಮತ್ತು ಎ.ಕೆ.ಸಿಂಗ್ ಅವರು ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದಾಗ ಭೇಟಿಯಾಗಿದ್ದರು.
ಬಳಿಕ ಮಧು ಅವರಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಲಭಿಸಿತ್ತು. ಸಿಂಗ್ ಅವರು ತನ್ನ ಕನಸಾದ ಸೇನೆಗೆ ಸೇರಲು ತೆರಳಿದ್ದರು.
ಸಿಂಗ್ ಅವರು ಎಡಗಣ್ಣಿನ ನರಕ್ಕೆ ಹಾನಿಯಾಗಿದ್ದು, ದೃಷ್ಟಿ ಕಳಕೊಂಡಿದ್ದಾರೆ ಎಂದು ಎನ್ಎಸ್‌ಜಿ ಅಧಿಕಾರಿಗಳು ಹೇಳಿದ್ದಾರೆ.
ಡಿಸೆಂಬರ್ 7ರಿಂದ ಚೆನ್ನೈನ ಮಿಲಿಟರಿ ಆಸ್ಪತ್ರೆಗೆ ಇವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅವರೀಗ ಶಂಕರ್ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಬರುವ ಮುನ್ನ ಅವರು ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
|